×
Ad

ಟ್ವಿಟರ್ ಇಂಡಿಯಾ ಮುಖ್ಯಸ್ಥರ ಪರ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದ ಯುಪಿ ಪೊಲೀಸರು

Update: 2021-06-29 12:49 IST

ಹೊಸದಿಲ್ಲಿ: ದಿಲ್ಲಿ ಸಮೀಪದ ಗಾಝಿಯಾಬಾದ್‍ನಲ್ಲಿ ಮುಸ್ಲಿಂ ವೃದ್ಧನೊಬ್ಬನ ಮೇಲೆ ಇತ್ತೀಚೆಗೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದ ಟ್ವೀಟ್‍ಗಳ ಕುರಿತಂತೆ ಎಫ್‍ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರಿಗೆ ಕರ್ನಾಟಕ ಹೈಕೋರ್ಟ್ ಬಂಧನದಿಂದ  ತಾತ್ಕಾಲಿಕ  ರಕ್ಷಣೆಯೊದಗಿಸಿದ ಕ್ರಮವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ.

ಅತ್ತ ಮಹೇಶ್ವರಿ ಅವರು ಕೂಡ ಸುಪ್ರೀಂ ಕೋರ್ಟ್‍ಗೆ ಕೇವಿಯಟ್ ಸಲ್ಲಿಸಿದ್ದಾರಲ್ಲದೆ ಉತ್ತರ ಪ್ರದೇಶ ಪೊಲೀಸರ ಅಪೀಲಿನ ಕುರಿತಂತೆ ಯಾವುದೇ ಆದೇಶ ಹೊರಡಿಸುವ ಮುನ್ನ ತಮ್ಮ ಮಾತುಗಳನ್ನೂ ಆಲಿಸಬೇಕೆಂದು ಕೋರಿದ್ದಾರೆ.

ಮನೀಶ್ ಮಹೇಶ್ವರಿ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಕ್ಕೆ ಉತ್ತರ ಪ್ರದೇಶ ಪೊಲೀಸರನ್ನು ನಿರ್ಬಂಧಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತಲ್ಲದೆ ಬೆಂಗಳೂರು ನಿವಾಸಿಯಾಗಿರುವ ಮಹೇಶ್ವರಿ ಅವರು ಉತ್ತರ ಪ್ರದೇಶಕ್ಕೆ ಈಗ ತೆರಳುವುದು ಅಗತ್ಯವಿಲ್ಲ ಎಂದು ಹೇಳಿತ್ತು.

ಗಾಝಿಯಾಬಾದ್ ಪ್ರಕರಣ ಸಂಬಂಧ ದಿಲ್ಲಿ-ಉತ್ತರ ಪ್ರದೇಶ ಗಡಿಯ ಲೋನಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಉತ್ತರ ಪ್ರದೇಶ ಪೊಲೀಸರ ಸಮನ್ಸ್ ಪ್ರಶ್ನಿಸಿ  ಮಹೇಶ್ವರಿ ಅವರು ಹೈಕೋರ್ಟ್ ಕದ ತಟ್ಟಿದ್ದರು.

ಈ ಪ್ರಕರಣ ಸಂಬಂಧ ಈಗಾಗಲೇ ಹಲವು ಪತ್ರಕರ್ತರ ವಿರುದ್ಧವೂ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News