×
Ad

ಫಿಲಿಪ್ಪೀನ್ಸ್ ನ ನದಿಯನ್ನು ಮುಂಬೈನ ಮೀಥಿ ನದಿ ಎಂದು ಪೋಸ್ಟ್ ಮಾಡಿದ ಬಿಜೆಪಿ ನಾಯಕಿ ಪ್ರೀತಿ ಗಾಂಧಿ

Update: 2021-06-29 13:24 IST

ಹೊಸದಿಲ್ಲಿ: ಬಿಜೆಪಿ ಮಹಿಳಾ ಮೋರ್ಚಾದ ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿರುವ ಪ್ರೀತಿ ಗಾಂಧಿ ಅವರು ಅಹ್ಮದಾಬಾದ್‍ನ ಸಬರಮತಿ ನದಿ ತೀರ ಪ್ರದೇಶದ ಚಿತ್ರದ ಜತೆಗೆ ಮುಂಬೈ ಮೀಥಿ ನದಿಯ ಚಿತ್ರವನ್ನು  ಪೋಸ್ಟ್ ಮಾಡಿ ಮೀಥಿ ನದಿಯ ಅಭಿವೃದ್ಧಿಗೆ ಮಹಾರಾಷ್ಟ್ರ ಸರಕಾರ ರೂ. 1000 ಕೋಟಿಗೂ ಹೆಚ್ಚು ಹಣ ವ್ಯಯಿಸಿರುವ ಹೊರತಾಗಿ ಅದರ ಸ್ಥಿತಿ ದಯನೀಯವಾಗಿದೆ ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ.

ಅವರ ಈ ಪೋಸ್ಟ್ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

ಪ್ರೀತಿ ಗಾಂಧಿ ಅವರು ಪೋಸ್ಟ್ ಮಾಡಿರುವ ಮೊದಲ ಚಿತ್ರ ಅಹ್ಮದಾಬಾದ್‍ನ ಸಾಬರಮತಿ ನದಿ ತೀರ ಪ್ರದೇಶದ್ದಾಗಿದ್ದು ಅಲ್ಲಿನ ಅಧಿಕೃತ ವೆಬ್ ಸೈಟ್‍ನಲ್ಲೂ ಈ ಚಿತ್ರ ಕಾಣಬಹುದು. ಆದರೆ ಮೀಥಿ ನದಿಯದ್ದೆಂದು ಅವರು ಪೋಸ್ಟ್ ಮಾಡಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ಚಿತ್ರ ಗೆಟ್ಟಿ ಇಮೇಜಸ್‍ನಲ್ಲಿ ಕಂಡು ಬಂತಲ್ಲದೆ ಅದರಲ್ಲಿ ನೀಡಿದ ವಿವರಣೆಯ ಪ್ರಕಾರ ಅದು ಫಿಲಿಪ್ಪೀನ್ಸ್ ರಾಜಧಾನಿ ಮನೀಲಾದಲ್ಲಿ ಜನವರಿ 2008ರಂದು ಕ್ಲಿಕ್ಕಿಸಲಾಗಿದ್ದೆಂಬ ಮಾಹಿತಿಯಿದೆ.

ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ 2019ರಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಇರುವ ವಿವರಣೆಯಂತೆ ಮೀಥಿ ನದಿ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರವನ್ನು 2006ರಲ್ಲಿ ಎಂಎಂಆರ್‍ಡಿಎ ಹಾಗೂ ಬಿಎಂಸಿ ನಡುವೆ ಸಮನ್ವಯಕ್ಕೆ  ರಚಿಸಲಾಗಿದೆ ಹಾಗೂ ಮೀಥಿ ನದಿ ಸಂರಕ್ಷಣೆ ಮತ್ತು ನೆರೆ ತಡೆಯುವ ಉದ್ದೇಶದಿಂದ ರಚಿಸಲಾಗಿದೆ. ಆದರೆ ಸಮಿತಿ 2013ರಿಂದೀಚೆಗೆ ಒಮ್ಮೆಯೂ ಸಭೆ ಸೇರಿಲ್ಲ ಎಂದು ವರದಿಯಾಗಿದೆ. ಆರ್‍ಟಿಐ ಮಾಹಿತಿಯ ಪ್ರಕಾರ ಎಂಎಂಆರ್‍ಡಿಎ ಹಾಗೂ ಬಿಎಂಸಿ ಮೀಥಿ ನದಿ ಸಂರಕ್ಷಣೆಗಾಗಿ ರೂ 1200 ಕೋಟಿಗೂ ಹೆಚ್ಚು ಹಣ ವ್ಯಯಿಸಿದೆ.

ಮೀಥಿ ನದಿಗೆ ಸಂಬಂಧಿಸಿದಂತೆ ಹಾಗೂ ಅದರ ದಯನೀಯ ಸ್ಥಿತಿಯ ಕುರಿತು ಹಲವಾರು ಚಿತ್ರಗಳಿದ್ದರೂ ಪ್ರೀತಿ ಗಾಂಧಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಮಾತ್ರ ಫಿಲಿಪ್ಪೀನ್ಸ್ ನ ನದಿಯೊಂದರ ಚಿತ್ರವನ್ನು ಮೀಥಿ ನದಿ ಎಂದು ತಪ್ಪಾಗಿ ಬಿಂಬಿಸಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News