ಭಯೋತ್ಪಾದನೆಗೆ ಡ್ರೋನ್ ಬಳಕೆ ಸಾಧ್ಯತೆಯ ಗಂಭೀರ ಪರಿಗಣನೆ: ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯ

Update: 2021-06-29 15:35 GMT

ವಿಶ್ವಸಂಸ್ಥೆ, ಜೂ.29: ‌ವ್ಯವಹಾರಾತ್ಮಕ ಮತ್ತು ವಾಣಿಜ್ಯ ಆಸ್ತಿಗಳನ್ನು ಗುರಿಯಾಗಿಸಿ ನಡೆಸುವ ಭಯೋತ್ಪಾದಕ ದಾಳಿಗಳಿಗೆ ಶಸ್ತ್ರಸಜ್ಜಿತ ಡ್ರೋನ್ಗಳ ಬಳಕೆಯ ಸಾಧ್ಯತೆಯನ್ನು ಅಂತರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯಿಸಿರುವುದಾಗಿ ವರದಿಯಾಗಿದೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ವಿಎಸ್‌ಕೆ ಕುಮುದಿನಿ, ಡ್ರೋನ್‌ಗಳು ಅಲ್ಪವೆಚ್ಚದ್ದಾಗಿದ್ದು ಸುಲಭವಾಗಿ ಲಭ್ಯವಾಗುವುದರಿಂದ ಇದನ್ನು ಬಳಸಿ ನಡೆಸುವ ದಾಳಿಯ ಬಗ್ಗೆ ಬೆದರಿಕೆ ಹೆಚ್ಚಿ ದೆ ಎಂದರು. 

‘ಜಾಗತಿಕ ಭಯೋತ್ಪಾದನೆ: ಪ್ರಸ್ತುತ ಬೆದರಿಕೆ ಮತ್ತು ಉದಯೋನ್ಮುಖ ಪ್ರವೃತ್ತಿಗಳ ವೌಲ್ಯಮಾಪನ’ ಎಂಬ ವಿಷಯದಲ್ಲಿ ನಡೆದ ಅಧಿವೇಶನದಲ್ಲಿ ವಿಷಯ ಮಂಡಿಸಿದ ಅವರು, ಭಯೋತ್ಪಾದನೆ ಉದ್ದೇಶಕ್ಕೆ ಮಾಹಿತಿ ಮತ್ತು ಪ್ರಸಾರ ತಂತ್ರಜ್ಞಾನದ ದುರ್ಬಳಕೆಯು ಅತ್ಯಂತ ಗಂಭೀರವಾದ ಭಯೋತ್ಪಾದನೆಯ ಬೆದರಿಕೆಯಾಗಿದೆ. ಕೋವಿಡ್ ಸೋಂಕು ಹಾಗೂ ಆ ನಂತರದ ಲಾಕ್ಡೌನ್ ಮತ್ತಿತರ ನಿರ್ಬಂಧಗಳು ಜನರ ಮೇಲಿನ ಇಂಟರ್ನೆಟ್ ಪರಿಣಾಮವನ್ನು ಮತ್ತಷ್ಟು ವರ್ಧಿಸಿದೆ . 

ಉಗ್ರ ಚಟುವ ಟಿಕೆ ಮತ್ತು ಉಗ್ರರ ಗುಂಪಿಗೆ ನೇಮಕಾತಿಗೆ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಇಂಟರ್ನೆಟ್ ಮೂಲಕ ಜನರನ್ನು ಸಂಪರ್ಕಿಸಿ ತಮ್ಮತ್ತ ಆಕರ್ಷಿಸಲು ಉಗ್ರರಿಗೆ ಸುಲಭವಾಗುತ್ತಿದೆ. ಸಾಂಕ್ರಾಮಿಕದ ಸಂದರ್ಭ ವೀಡಿಯೋ ಗೇಮ್‌ಗಳ  ಬಳಕೆಯಿಂದಲೂ ಉಗ್ರವಾದದ ಪ್ರಚಾರ ನಡೆಸಲಾಗಿದೆ ಎಂದು ಕುಮುದಿನಿ ಹೇಳಿದರು. ರವಿವಾರ ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಭಾರತ ಈ ಹೇಳಿಕೆ ನೀಡಿದೆ. ಜಮ್ಮುವಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಡ್ರೋನ್ ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಈ ಪ್ರಕರಣದಲ್ಲಿ ಡ್ರೋನ್ ಬಳಕೆಯ ಸಾಧ್ಯತೆಯನ್ನು ಭಾರತದ ವಾಯುಪಡೆ ಇನ್ನೂ ದೃಢೀಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News