ದಿಲ್ಲಿ:ಎಲ್‌ಪಿಜಿ ಸಿಲಿಂಡರ್ ಸ್ಫೋಟಕ್ಕೆ4 ಮಂದಿ ಮೃತ್ಯು
ಹೊಸದಿಲ್ಲಿ: ಎಲ್‌ಪಿಜಿ ಸಿಲಿಂಡರ್ ಸ್ಫೋಟದ ಹಿನ್ನೆಲೆಯಲ್ಲಿ ಶಹದಾರಾ ರೆಸಿಡೆನ್ಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ 45 ವರ್ಷದ ಮಹಿಳೆ, ಆಕೆಯ ಇಬ್ಬರು ಪುತ್ರರು, ಓರ್ವ ಪುತ್ರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ದಿಲ್ಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿಗಳು ತಿಳಿಸಿದ್ದಾರೆ.
ಶಹದಾರಾದ ಫಾರ್ಶ್ ಬಝಾರ್ ಪ್ರದೇಶದಲ್ಲಿ ಮಂಗಳವಾರ ಮಧ್ಯರಾತ್ರಿ ಸಿಲಿಂಡರ್ ಸ್ಫೋಟದ ಬಗ್ಗೆ ಕರೆ ಬಂದಿದ್ದು, ಒಂಬತ್ತು ಅಗ್ನಿಶಾಮಕ ಯಂತ್ರಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಸೇವೆ ತಿಳಿಸಿದೆ.
ಸ್ಫೋಟದಿಂದಾಗಿ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಮನೆಯ ಮುಂಭಾಗದ ಭಾಗದಲ್ಲಿ ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿ ಇದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ,
"ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನಲ್ಲಿ ಸೋರಿಕೆಯಾದ ಕಾರಣ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ, ಮತ್ತೊಬ್ಬ ವ್ಯಕ್ತಿಯು ಸುಟ್ಟ ಗಾಯಗಳಿಗೆ ಒಳಗಾಗಿದ್ದಾನೆ ಹಾಗೂ ಗಾಯಾಳುವನ್ನು ಹೇಡ್ಗೆವಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು" ಎಂದು ಡಿಎಫ್‌ಎಸ್ ನಿರ್ದೇಶಕ ಅತುಲ್ ಗರ್ಗ್ ಹೇಳಿದರು.
ಮುನ್ನೀ ದೇವಿ, ಅವರ ಇಬ್ಬರು ಗಂಡು ಮಕ್ಕಳಾದ ಓಂ ಪ್ರಕಾಶ್ (22) ,ನರೇಶ್ (23), ಹಾಗೂ ಮಗಳು ಸುನೀತಾ (18) ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ಮತ್ತೊಬ್ಬ ಮಗ ಲಾಲ್ ಚಂದ್ (29) ಘಟನೆಯಲ್ಲಿ ಶೇ. 30 ರಷ್ಟು ಸುಟ್ಟಗಾಯಗಳನ್ನು ಅನುಭವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.