ಜು.6ರಿಂದ 9ರವರೆಗೆ ಜಮ್ಮು-ಕಾಶ್ಮೀರಕ್ಕೆ ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಭೇಟಿ

Update: 2021-06-30 14:51 GMT

ಹೊಸದಿಲ್ಲಿ,ಜೂ.30: ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸಲು ಪ್ರಯತ್ನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಜು.6ರಿಂದ ಜು.9ರವರೆಗೆ ಅಲ್ಲಿಗೆ ಭೇಟಿ ನೀಡಿ ರಾಜಕೀಯ ಪಕ್ಷಗಳು,ಸರಕಾರಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸೇರಿದಂತೆ ಎಲ್ಲ ಪಾಲುದಾರರೊಂದಿಗೆ ಚರ್ಚಿಸಲಿದೆ ಎಂದು ಬುಧವಾರ ಇಲ್ಲಿ ಅಧಿಕಾರಿಗಳು ತಿಳಿಸಿದರು.

ಆಯೋಗವು ತನ್ನ ಭೇಟಿಯ ಸಂದರ್ಭದಲ್ಲಿ 2019ರ ಜಮ್ಮು-ಕಾಶ್ಮೀರ ಪುನರ್‌ಸಂಘಟನೆ ಕಾಯ್ದೆಯಲ್ಲಿ ಸೂಚಿಸಿರುವಂತೆ ಈಗಾಗಲೇ ಜಾರಿಯಲ್ಲಿರುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಕುರಿತು ಮಾಹಿತಿಗಳನ್ನು ಸಂಗ್ರಹಿಸಲಿದೆ.

 ಚುನಾವಣಾ ಆಯೋಗವು ಕಳೆದ ವರ್ಷದ ಮಾರ್ಚ್‌ನಲ್ಲಿ ನ್ಯಾ.(ನಿವೃತ್ತ) ರಂಜನಾ ಪ್ರಕಾಶ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ರಚಿಸಿದ್ದು,ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಅದರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.

ಚುನಾವಣೆಗಳಿಗಾಗಿ ಕ್ಷೇತ್ರಗಳನ್ನು ರೂಪಿಸುವ ಹೊಣೆಯನ್ನು ಹೊತ್ತಿರುವ ಆಯೋಗವು ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಕ್ಷೇತ್ರಗಳನ್ನು ರೂಪಿಸಲಿದೆ.

 ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಗೆ ತಾನು ಸೇರಿಸಲಿರುವ ಏಳು ನೂತನ ಕ್ಷೇತ್ರಗಳ ಹಂಚಿಕೆಯ ಬಗ್ಗೆಯೂ ಆಯೋಗವು ಚರ್ಚಿಸಲಿದೆ. ಇದರೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಒಟ್ಟು ಕ್ಷೇತ್ರಗಳ ಸಂಖ್ಯೆ 114ಕ್ಕೆ ಏರಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 90 ಕೇತ್ರಗಳಿಗೆ ಪ್ರದೇಶಗಳ ಹಂಚಿಕೆಯ ಮೇಲೂ ಅದು ಗಮನವನ್ನು ಕೇಂದ್ರೀಕರಿಸಲಿದೆ. ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಇತರ 24 ಕ್ಷೇತ್ರಗಳನ್ನು ಈ ಪ್ರಕ್ರಿಯೆಯು ಒಳಗೊಂಡಿಲ್ಲ.

ಜಮ್ಮು-ಕಾಶ್ಮೀರದಲ್ಲಿ ಈ ಹಿಂದಿನ ಕ್ಷೇತ್ರ ಪುನರ್ವಿಂಗಡಣೆಯು 1981ರ ಜನಗಣತಿ ಆಧಾರದಲ್ಲಿ 1995ರಲ್ಲಿ ನಡೆದಿತ್ತು. 2001ರ ಜನಗಣತಿಯ ಬಳಿಕ ಮುಂದಿನ ಕ್ಷೇತ್ರ ಪುನರ್ವಿಂಗಡಣೆಯನ್ನು 2026ವರೆಗೆ ತಡೆಹಿಡಿಯಲು ಆಗಿನ ಜಮ್ಮು-ಕಾಶ್ಮೀರ ವಿಧಾನಸಭೆಯು ಕಾನೂನೊಂದನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News