ಒಂದು ಷರತ್ತಿನ ಹೊರತು ಟ್ರಾಯ್‌ನ ಶುಲ್ಕ ಆದೇಶದ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಬಾಂಬೆ ಹೈಕೋರ್ಟ್
ಮುಂಬೈ,ಜೂ.30: ಒಂದು ಚಾನೆಲ್‌ನ ದರವು ಗುಚ್ಛದಲ್ಲಿನ ಅತ್ಯಂತ ಹೆಚ್ಚಿನ ದರದ ಚಾನೆಲ್‌ನ ಮೂರನೇ ಒಂದಕ್ಕಿಂತ ಹೆಚ್ಚಿರಬಾರದು ಎಂಬ ಕಳೆದ ವರ್ಷದ ಟ್ರಾಯ್‌ನ ಶುಲ್ಕ ಆದೇಶದಲ್ಲಿನ ಷರತ್ತನ್ನು ರದ್ದುಗೊಳಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು ಉಳಿದಂತೆ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಬುಧವಾರ ಎತ್ತಿಹಿಡಿದಿದೆ.
ಟಿವಿ ಪ್ರಸಾರಕರ ಪ್ರಾತಿನಿಧಿಕ ಸಂಸ್ಥೆ ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಷನ್,ಫಿಲ್ಮ್ ಆ್ಯಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ,ಝೀ ಎಂಟರಟೇನಮೆಂಟ್ ಲಿ. ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್‌ನಂತಹ ಹಲವಾರು ಪ್ರಸಾರಕರು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಮ್ಜದ್ ಸಯ್ಯದ್ ಮತ್ತು ಅನುಜಾ ಪ್ರಭುದೇಸಾಯಿ ಅವರ ಪೀಠವು ಈ ತೀರ್ಪನ್ನು ನೀಡಿದೆ.
2020,ಜ.1ರಂದು ಟ್ರಾಯ್ ಹೊರಡಿಸಿದ್ದ ನೂತನ ಶುಲ್ಕ ನಿಯಮಗಳಂತೆ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ (ಎನ್‌ಸಿಎಫ್) ವನ್ನು ತಗ್ಗಿಸಲಾಗಿತ್ತು ಮತ್ತು ಇದು ಬಳಕೆದಾರರಿಗೆ ಲಾಭದಾಯಕವಾಗಿತ್ತು. ಹಿಂದೆ 130 ರೂ.ಗಳಿಗೆ ಎಲ್ಲ ಉಚಿತ ಚಾನೆಲ್‌ಗಳು ಲಭ್ಯವಾಗುತ್ತಿದ್ದು,ಬಳಕೆದಾರರು ಹೆಚ್ಚುವರಿ ಚಾನೆಲ್‌ಗಳನ್ನು ವೀಕ್ಷಿಸಲು ಹೆಚ್ಚಿನ ಹಣವನ್ನು ಪಾವತಿಸಬೇಕಿತ್ತು. ಆದರೆ ನೂತನ ಶುಲ್ಕ ನಿಯಮಗಳಡಿ ಬಳಕೆದಾರರು 130 ರೂ.ಗಳನ್ನು ಪಾವತಿಸಿದರೆ 200 ಚಾನೆಲ್‌ಗಳು ಲಭ್ಯವಾಗುತ್ತಿದ್ದವು. ಪ್ರತಿ ಚಾನೆಲ್‌ನ ಶುಲ್ಕಗಳಲ್ಲಿ ಬದಲಾವಣೆಗಳನ್ನು ಮಾಡಲೂ ಟ್ರಾಯ್ ಆದೇಶಿಸಿತ್ತು.
ನೂತನ ನಿಯಮಗಳು ನಿರಂಕುಶ ಮತ್ತು ಅಸಮಂಜಸವಾಗಿವೆ ಮತ್ತು ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಅರ್ಜಿದಾರರು ವಾದಿಸಿದ್ದರು.
ಉದ್ಯಮ ಪಾಲುದಾರರು ತೀರ್ಪನ್ನು ಅಧ್ಯಯನ ಮಾಡುವಂತಾಗಲು ಮತ್ತು ತಮ್ಮ ಭವಿಷ್ಯದ ಕ್ರಮವನ್ನು ಕೈಗೊಳ್ಳುವಂತಾಗಲು ಕೆಲಸಮಯ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಟ್ರಾಯ್‌ಗೆ ನಿರ್ದೇಶಿಸಿ ಕಳೆದ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಉಚ್ಚ ನ್ಯಾಯಾಲಯವು ನೀಡಿದ್ದ ಆದೇಶಗಳನ್ನು ವಿಸ್ತರಿಸುವಂತೆ ಅರ್ಜಿದಾರರು ಕೋರಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ತನ್ನ ಆದೇಶಗಳ ಅವಧಿಯನ್ನು ಆರು ವಾರಗಳ ಕಾಲ ವಿಸ್ತರಿಸಿತು.