ಗುಜರಾತ್‍ನಲ್ಲಿ ಕೋವಿಡ್ ಲಸಿಕೆ ಅಭಾವ: ಗಂಟೆಗಟ್ಟಲೆ ಸಾಲು ನಿಂತು ವಾಪಸಾಗುತ್ತಿರುವ ಜನರು

Update: 2021-07-01 11:54 GMT

 ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯ ಗುಜರಾತ್‍ನಲ್ಲಿ ಕೋವಿಡ್ ಲಸಿಕೆಯ ತೀವ್ರ ಕೊರತೆ ಎದುರಾಗಿದೆಯೆನ್ನಲಾಗಿದೆ. ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲೂ ಲಸಿಕೆ ಕೊರತೆ ಉಂಟಾಗಿದೆ ಹಾಗೂ 18-44 ವಯೋಮಿತಿಯ ಜನರು ತಮ್ಮ ಮೊದಲ ಡೋಸ್ ಪಡೆಯಲು  12 ಗಂಟೆ ಸರತಿ ನಿಂತರೂ ಪ್ರಯೋಜನವಿಲ್ಲದಂತಾಗಿದೆ ಎಂಬ ದೂರುಗಳು ವ್ಯಾಪಕವಾಗಿದ ಕುರಿತು nationalheral ವರದಿ ಮಾಡಿದೆ.

ಲಸಿಕೆಗಳ ಕೊರತೆಯ ಹಿನ್ನೆಲೆಯಲ್ಲಿ ಉದ್ಯಮಿಗಳಿಗೆ ವ್ಯಾಪಾರಿಗಳಿಗೆ ಕಡ್ಡಾಯ ಲಸಿಕೆಗೆ  ಈ ಹಿಂದೆ ವಿಧಿಸಲಾಗಿದ್ದ ಗಡುವನ್ನು ಜುಲೈ 10ರ ತನಕ ವಿಸ್ತರಿಸಲಾಗಿದೆ.

ವಾಣಿಜ್ಯ ಮಳಿಗೆಗಳು, ಸಂಕೀರ್ಣಗಳು, ಜಿಮ್, ಗ್ರಂಥಾಲಯಗಳು, ರೆಸ್ಟಾರೆಂಟ್‍ಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸಿನೆಮಾ ಥಿಯೇಟರ್ ಮಾಲ್ ಇವುಗಳ ಮಾಲಕರು ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಜೂನ್ 24ರಂದು ಸರಕಾರ ಆದೇಶಿಸಿತ್ತಲ್ಲದೆ ದೊಡ್ಡ ನಗರಗಳಲ್ಲಿ ಜೂನ್ 30 ಹಾಗೂ ಇತರೆಡೆಗಳಿಗೆ ಜುಲೈ 10ರ ಗಡುವು ವಿಧಿಸಿತ್ತು.

ಆದರೆ ಗಡುವು ವಿಸ್ತರಿಸಿದರೂ  ಪ್ರಯೋಜನವಾಗದು, ಈಗ ಅಹ್ಮದಾಬಾದ್‍ನಂತಹ ಪ್ರಮುಖ ನಗರಗಳಲ್ಲಿ ಲಸಿಕೆಗಳು ಲಭ್ಯವಾಗುತ್ತಿಲ್ಲ ಎಂದು ಗುಜರಾತ್ ವರ್ತಕರ ಫೆಡರೇಶನ್ ಅಧ್ಯಕ್ಷ ಜಯೇಂದ್ರ ತನ್ನಾ ಹೇಳುತ್ತಾರೆ.

ಅಹ್ಮದಾಬಾದ್ ಹೊರತಾಗಿ ರಾಜಕೋಟ್, ಸೂರತ್, ವಡೋದರಾ, ಭಾವ್ನಗರ್, ಜುನಾಗಢ್, ವಲ್ಸದ್, ಆನಂದ್ ಮುಂತಾದೆಡೆ ಕೂಡ ನೂರಾರು ಯುವಜನತೆ ಲಸಿಕೆಗಾಗಿ 12 ಗಂಟೆಗಳಿಗೂ ಹೆಚ್ಚು ಸಮಯ ಕಾದು ವಾಪಸಾಗುತ್ತಿದ್ದಾರೆ.

ಕಳೆದ ವಾರ ರಾಜ್ಯಕ್ಕೆ 28 ಲಕ್ಷ ಡೋಸ್ ಲಸಿಕೆಗಳು ಲಭ್ಯವಾಗಿದ್ದರೆ ಈ ವಾರ ಕೇವಲ 18 ಲಕ್ಷ ಡೋಸ್ ಲಸಿಕೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News