ಇಸ್ಲಾಂಗೆ ಮತಾಂತರಿಸುತ್ತಿದ್ದಾರೆ ಎಂದು ಇಬ್ಬರನ್ನು ಬಂಧಿಸಿದ ಬಳಿಕ ಸಾಕ್ಷ್ಯಕ್ಕಾಗಿ ಪರದಾಡುತ್ತಿರುವ ಉ.ಪ್ರ ಪೊಲೀಸರು
ಸಾವಿರಾರು ಜನರನ್ನು ಇಸ್ಲಾಮಿಗೆ ಮತಾಂತರಿಸಿದ ಆರೋಪದಲ್ಲಿ ದಿಲ್ಲಿಯ ಬಾಟ್ಲಾ ಹೌಸ್ ನಿವಾಸಿ ಮುಹಮ್ಮದ್ ಉಮರ್ ಗೌತಮ್ ಮತ್ತು ಮೌಲ್ವಿ ಮುಫ್ತಿ ಖಾಝಿ ಜಹಾಂಗೀರ್ ಖಾಸ್ಮಿ ಅವರನ್ನು ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಿರುವ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಅವರ ವಿರುದ್ಧ ಯಾವುದೇ ಸಾಕ್ಷಾಧಾರಗಳು ಇಲ್ಲದೆ ಪರದಾಡುತ್ತಿದ್ದಾರೆ.
ಗೌತಮ್ (57) ಅವರು 2010ರಲ್ಲಿ ಸ್ಥಾಪಿಸಿದ ಇಸ್ಲಾಮಿಕ್ ದಾವಾ ಸೆಂಟರ್ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜೊತೆಗೆ ಬಡವರಿಗೆ ಆಹಾರ ಧಾನ್ಯಗಳು ಮತ್ತು ಬ್ಲಾಂಕೆಟ್ ಗಳನ್ನು ವಿತರಿಸುತ್ತದೆ. ಅಫಿಡವಿಟ್ಗಳನ್ನು ಮಾಡಿಸಲು ಬಯಸಿದ್ದ ಹಲವರಿಗೆ ನೆರವಾಗಿರುವ ಈ ಸಂಸ್ಥೆಯು ಅವರ ಮತಾಂತರಗಳು ರಾಜ್ಯ ಗೆಝೆಟ್ನಲ್ಲಿ ಸೇರ್ಪಡೆಯಾಗುವಂತೆ ಮಾಡುತ್ತದೆ.
ಗೌತಮ್ ಜೂ.17ರಂದು ಪೊಲೀಸರ ಸೂಚನೆಯಂತೆ ಘಾಝಿಯಾಬಾದ್ ನ ಮಸುರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರು 2012 ಮತ್ತು 2013ರಲ್ಲಿ ಗೌತಮ್ ಅವರ ಕಝಕಿಸ್ತಾನ್ ಪ್ರವಾಸಗಳ ಬಗ್ಗೆ ಮತ್ತು ಕೆನಡಾದ ಇಸ್ಲಾಮಿಕ್ ವಿದ್ವಾಂಸ ಬಿಲಾಲ್ ಫಿಲಿಪ್ಸ್ ಹಾಗೂ ಈಗ ಮಲೇಶಿಯಾದಲ್ಲಿರುವ ಭಾರತೀಯ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಜೊತೆ ಸಂಬಂಧ ಹೊಂದಿದ್ದೀರಾ ಎಂದು ಪ್ರಶ್ನಿಸಿದ್ದರು.
ಜೂ.19ರಂದು ಪೊಲೀಸರು ಸೂಚಿಸಿದಂತೆ ತನ್ನ ಕುಟುಂಬದ ಬ್ಯಾಂಕ್ ಖಾತೆಗಳ ವಿವರಗಳು ಮತ್ತು ತನ್ನ ಪಾಸ್ಪೋರ್ಟ್ ನೊಂದಿಗೆ ಗೌತಮ್ ಮತ್ತೊಮ್ಮೆ ಪೊಲೀಸ್ ಠಾಣೆಗೆ ತೆರಳಿದ್ದರು. ಅಂದು ಬೆಳಿಗ್ಗೆ ದಿಲ್ಲಿಯಿಂದ ಹೊರಟಿದ್ದ ಅವರು ಬಳಿಕ ಮನೆಗೆ ವಾಪಸಾಗಿರಲಿಲ್ಲ. ಗಾಬರಿಗೊಂಡ ಕುಟುಂಬ ಸದಸ್ಯರು ಪೊಲೀಸರನ್ನು ವಿಚಾರಿಸಿದಾಗ,‘ಗೌತಮ್ ಒಂದು ಸಾವಿರ ಜನರನ್ನು ಮತಾಂತರಿಸಿದ್ದಾರೆ ’ಎಂದು ಹೇಳಿದ್ದನ್ನು ಬಿಟ್ಟರೆ ಬೇರೆ ಯಾವುದೇ ಉತ್ತರ ನೀಡಿರಲಿಲ್ಲ.
ಜೂ.21ರಂದು ಬೆಳಿಗ್ಗೆ ಗೌತಮ್ ಪತ್ನಿ ರಝಿಯಾ ಉಮರ್(51) ಟಿವಿ ಆನ್ ಮಾಡಿದಾಗ ಸುದ್ದಿವಾಹಿನಿಗಳಲ್ಲಿ ತನ್ನ ಪತಿಯ ಫೋಟೊ ‘ಪೊಲೀಸರು ಮತಾಂತರ ಜಾಲವೊಂದನ್ನು ಭೇದಿಸಿದ್ದಾರೆ ’ಎಂಬ ಶೀರ್ಷಿಕೆಯೊಂದಿಗೆ ಪ್ರಸಾರವಾಗುತ್ತಿದ್ದುದನ್ನು ಕಂಡು ಕಂಗಾಲಾಗಿದ್ದರು. ತಪ್ಪು ಮಾಹಿತಿ, ಬಲಾತ್ಕಾರ ಮತ್ತು ವಂಚನೆಯಿಂದ ಸಾವಿರಾರು ಜನರನ್ನು ಮತಾಂತರಿಸಿದ್ದ ಆರೋಪದಲ್ಲಿ ಗೌತಮ್ ಮತ್ತು ಖಾಸ್ಮಿಯವರನ್ನು ಉ.ಪ್ರ.ಎಟಿಎಸ್ ಬಂಧಿಸಿತ್ತು.
ಒಳಸಂಚು,ಮೋಸ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದ ಆರೋಪಗಳನ್ನೂ ಅವರ ಮೇಲೆ ಹೊರಿಸಲಾಗಿತ್ತು. ಅವರಿಬ್ಬರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಅನ್ನು ಹೇರುವಂತೆ ಜೂ.22ರಂದು ಮುಖ್ಯಮಂತ್ರಿ ಆದಿತ್ಯನಾಥ ಆದೇಶಿಸಿದ್ದರು.
ಜೂ.20ರಂದು ಸಲ್ಲಿಸಲಾಗಿರುವ ಎಫ್ಐಆರ್ನಲ್ಲಿ ಭಾರತದಲ್ಲಿ ಜನರನ್ನು ಇಸ್ಲಾಮಿಗೆ ಮತಾಂತರಿಸಲು ದೇಶವಿರೋಧಿ ಮತ್ತು ಸಮಾಜ ವಿರೋಧಿ ಶಕ್ತಿಗಳು ಹಾಗು ಧಾರ್ಮಿಕ ಸಂಸ್ಥೆಗಳು ಪಾಕಿಸ್ತಾನದ ಐಎಸ್ಐ ಮತ್ತು ಇತರ ವಿದೇಶಿ ಮೂಲಗಳಿಂದ ಪಡೆದಿರುವ ಹಣವನ್ನು ಬಳಸುತ್ತಿವೆ ಎಂಬ ಮಾಹಿತಿ ಎಟಿಎಸ್ಗೆ ಲಭಿಸಿತ್ತು. ದೇಶದ ಜನಸಂಖ್ಯಾ ಸ್ವರೂಪವನ್ನು ಬದಲಿಸಲು ಮತ್ತು ಧಾರ್ಮಿಕ ಗುಂಪುಗಳ ಮಧ್ಯೆ ವೈರತ್ವವನ್ನು ಸೃಷಿಸಲು ಮತಾಂತರವನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಆರೋಪಗಳ ಕುರಿತು ತನಿಖೆಯು ಗೌತಮ್ ರತ್ತ ಬೆಟ್ಟು ಮಾಡಿತ್ತು ಮತ್ತು ತಾನು ಸಾವಿರಾರು ಜನರನ್ನು ಇಸ್ಲಾಮಿಗೆ ಮತಾಂತರಿಸಿದ್ದೇನೆ ಮತ್ತು ಮುಸ್ಲಿಮರೊಂದಿಗೆ ಅವರ ಮದುವೆಗಳನ್ನು ಮಾಡಿಸಿರುವುದಾಗಿ ಗೌತಮ್ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿರುವ ಎಫ್ಐಆರ್, ಅವರ ಸಹಚರ ಖಾಸ್ಮಿ ಮತಾಂತರ ಮತ್ತು ವಿವಾಹ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದರು ಎಂದು ಹೇಳಿದೆ.
ನೊಯ್ಡ ಕಿವುಡರ ಸೊಸೈಟಿಯ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಆಮಿಷವೊಡ್ಡಿ ಇಸ್ಲಾಮಿಗೆ ಮತಾಂತರಗೊಳಿಸಿದ್ದನ್ನು ಎಟಿಎಸ್ ನ ನೊಯ್ಡಾ ಘಟಕವು ಬಯಲಿಗೆಳೆದಿದೆ ಎಂದು ಎಫ್ಆರ್ನಲ್ಲಿ ಆರೋಪಿಸಲಾಗಿದೆಯಾದರೂ, ಮತಾಂತರವನ್ನು ಯಾರು ಮಾಡಿದ್ದರು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸೊಸೈಟಿಯ ಇಬ್ಬರು ವಿದ್ಯಾರ್ಥಿಗಳ ಮತಾಂತರದ ನಿದರ್ಶನಗಳನ್ನು ಅದು ನೀಡಿದೆಯಾದರೂ ಅದನ್ನು ಗೌತಮ್ ಮತ್ತು ಖಾಸ್ಮಿ ಅವರೊಂದಿಗೆ ತಳುಕು ಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ.
‘ನಮ್ಮ ಕೇಂದ್ರದಲ್ಲಿ ಎಂದೂ ಯಾವುದೇ ಧಾರ್ಮಿಕ ಬೋಧನೆಗಳು ನಡೆದಿಲ್ಲ ’ ಎಂದು ನೊಯ್ಡ ಡೆಫ್ ಸೊಸೈಟಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರೆ,ಸೊಸೈಟಿಯ ಸಿಬ್ಬಂದಿ ಮನೀಷ್ ಎಂಬಾತ ‘ಬಂಧಿತರು ಎಂದೂ ನಮ್ಮ ಸೊಸೈಟಿಗೆ ಭೇಟಿ ನೀಡಿರಲಿಲ್ಲ ’ಎಂದು ಜೂ.23ರಂದು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದ.
ಅಂದ ಹಾಗೆ ಪೊಲೀಸರ ಈವರೆಗಿನ ತನಿಖೆಯಲ್ಲಿ ಗೌತಮ್ ಮತ್ತು ಖಾಸ್ಮಿ ವಿರುದ್ಧ ಆರೋಪಗಳನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷಾಧಾರಗಳು ಲಭಿಸಿಲ್ಲ.
ನಾವು ಈಗಲೂ ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಸಾಕ್ಷಗಳನ್ನು ಕಲೆ ಹಾಕುತ್ತಿದ್ದೇವೆ ಎಂದು ಉತ್ತರ ಪ್ರದೇಶ ಎಡಿಜಿಪಿ ಪ್ರಶಾಂತ ಕುಮಾರ್ ಅವರು ಗೆ ತಿಳಿಸಿದರು.
ಅನಿಲ್ ಯಾದವ ಎಂಬಾತನ ದೂರಿನ ಮೇರೆಗೆ ಬೇರೊಂದು ಪ್ರಕರಣದಲ್ಲಿ ಬಂಧಿತರಾಗಿರುವ ವಿಪುಲ್ ವಿಜಯವರ್ಗೀಯ ಮತ್ತು ಕಾಶಿ ಗುಪ್ತಾ ಅಲಿಯಾಸ್ ಕಾಶಿಫ್ ಎಂಬವರನ್ನು ಮಸುರಿ ಪೊಲೀಸರು ವಿಚಾರಣೆಗೊಳಪಡಿಸಿದ ಸಂದರ್ಭ ಗೌತಮ್ ಹೆಸರು ಹೊರಬಂದಿತ್ತು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಇವರಿಬ್ಬರೂ ಜೂ.2ರಂದು ನಕಲಿ ಗುರುತುಗಳನ್ನು ಬಳಸಿ ಮಾರಕಾಯುಧಗಳೊಂದಿಗೆ ಘಾಝಿಯಾಬಾದ್ ನ ದಾಸ್ನಾ ದೇವಿ ದೇವಸ್ಥಾನವನ್ನು ಪ್ರವೇಶಿಸಿದ್ದರು ಮತ್ತು ಮಹಂತ ಯತಿ ನರಸಿಂಹಾನಂದ ಸರಸ್ವತಿಯನ್ನು ಕೊಲ್ಲಲು ಬಯಸಿದ್ದರು ಎಂದು ಆರೋಪಿಸಲಾಗಿದೆ. ಸರಸ್ವತಿ ತನ್ನ ಮುಸ್ಲಿಂ ವಿರೋಧಿ ಧರ್ಮಾಂಧತೆಗಾಗಿ ಹೆಸರಾಗಿದ್ದಾರೆ.
ಆದರೆ ಗೌತಮ್ ಹಾಗೂ ವರ್ಗೀಯ ಮತ್ತು ಗುಪ್ತಾ ಅವರ ನಡುವೆ ಏನು ಸಂಬಂಧವಿದೆ ಎನ್ನುವುದನ್ನು ಎಫ್ಐಆರ್ನಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ. ಗುಪ್ತಾ ಯಾರು ಎನ್ನುವುದು ನಮಗೆ ಗೊತ್ತಿಲ್ಲ. ವರ್ಗೀಯನನ್ನು ಒಮ್ಮೆ ಮಾತ್ರ ಗೌತಮ್ ಬೇರೆಯವರ ಮೂಲಕ ಭೇಟಿಯಾಗಿದ್ದರು ಎಂದು ರಝಿಯಾ ಉಮರ್ ತಿಳಿಸಿದರು. ತನ್ನ ಪತಿ ಬಲವಂತದ ಮತಾಂತರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬ ಆರೋಪಗಳನ್ನು ಅವರು ನಿರಾಕರಿಸಿದರು.
ತನ್ನ ಪತಿಯ ಇಸ್ಲಾಮಿಕ್ ದಾವಾ ಸೆಂಟರ್ ಎಂದೂ ವಿದೇಶಗಳಿಂದ ಹಣ ಸ್ವೀಕರಿಸಿಲ್ಲ,ಅದು ನಷ್ಟದಲ್ಲಿಯೇ ಕೆಲಸ ಮಾಡುತ್ತಿದೆ. ಖಾಸ್ಮಿ ನೋಂದಾಯಿತ ಮೌಲ್ವಿಯಾಗಿದ್ದು ಸೆಂಟರ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದರು ಎಂದು ರಝಿಯಾ ತಿಳಿಸಿದರು.
ಇಸ್ಲಾಮಿಕ್ ದಾವಾ ಸೆಂಟರ್ ಆರಂಭಿಸುವ ಮುನ್ನ 15 ವರ್ಷಗಳ ಕಾಲ ಗೌತಮ್ ಅಸ್ಸಾಮಿನಲ್ಲಿ ಸಂಸದ ಬದ್ರುದ್ದೀನ್ ಅಜ್ಮಲ್ ಅವರು ಆರಂಭಿಸಿದ್ದ ಮರ್ಕಝುಲ್ ಮಾರಿಫ್ ಲಾಭರಹಿತ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಉತ್ತರಾಖಂಡ್ನ ಜಿಬಿ ಪಂತ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡಿದ್ದ ಅವರು 1999ರಲ್ಲಿ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.
ಗೌತಮ್ ಮತ್ತು ಖಾಸ್ಮಿ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಹಲವಾರು ಲೋಪಗಳನ್ನು ಮಾಧ್ಯಮಗಳು ಬೆಟ್ಟುಮಾಡಿವೆ. ಪೊಲೀಸರು ತಮ್ಮ ತನಿಖೆಯ ಮೂಲಕ ಗೌತಮ್ ಮತ್ತು ಖಾಸ್ಮಿ ಮತಾಂತರಿಸಿದ್ದಾರೆ ಎನ್ನಲಾದವರ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ. ಈ ಪಟ್ಟಿಯಲ್ಲಿರುವ ಅಬ್ದುಲ್ ಸಮದ್ ಎಂಬಾತನಿಗಾಗಿ ಪೊಲೀಸರು ನಡೆಸಿದ ಶೋಧ ಉ.ಪ್ರದೇಶದ ಸಹರಾನೊಪುರದ ಶಿಟ್ಲಾ ಖೇಡಾ ಗ್ರಾಮದ ಪ್ರವೀಣ್ ಕುಮಾರ್ ಬಳಿಗೆ ಕರೆದೊಯ್ದಿತ್ತು. ತಾನು ಮತಾಂತರಗೊಂಡಿದ್ದೇನೆ ಮತ್ತು ಅಬ್ದುಲ್ ಸಮದ್ ಆಗಿದ್ದೇನೆ ಎನ್ನುವುದನ್ನು ನಿರಾಕರಿಸಿದ ಕುಮಾರ್,ತನ್ನನ್ನು ಮತಾಂತರಿಸಲು ಯಾರೂ ಪ್ರಯತ್ನಿಸಿರಲಿಲ್ಲ,ತಾನು ಹಿಂದು ಆಗಿದ್ದೇನೆ ಮತ್ತು ಸದಾ ಹಿಂದು ಆಗಿಯೇ ಇರುತ್ತೇನೆ ಎಂದು ತಿಳಿಸಿದರು.
ಪಟ್ಟಿಯಲ್ಲಿದ್ದ ಇತರರನ್ನು Scroll.in ಭೇಟಿಯಾದಾಗ ಅವರೆಲ್ಲ ತಾವು ಹಲವಾರು ವರ್ಷಗಳ ಹಿಂದೆಯೇ,ಯಾರದೇ ಒತ್ತಡವಿಲ್ಲದೆ ಸ್ವಂತ ಇಚ್ಛೆಯಿಂದ ಮತಾಂತರಗೊಂಡಿದ್ದೆವು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಮಧ್ಯಪ್ರದೇಶದ ಇಬ್ರಾಹಿಂ ಖಾನ್ ಎಂಬಾತ 1998ರಲ್ಲಿ ಮತಾಂತರಗೊಂಡಿದ್ದು,ಹಜ್ ಗೆ ತೆರಳಲು ಪ್ರಮಾಣಪತ್ರವನ್ನು ಪಡೆಯಲು ಕಳೆದ ವರ್ಷ ಇಸ್ಲಾಮಿಕ್ ದಾವಾ ಸೆಂಟರ್ ಅನ್ನು ಸಂಪರ್ಕಿಸಿದ್ದ. ಪಟ್ನಾದ ಗಝಲಾ ಎನ್ನುವ ಮಹಿಳೆ ತಾನು 1999ರಲ್ಲಿ ಇಸ್ಲಾಮಿಗೆ ಮತಾಂತರಗೊಂಡಿದ್ದೇನೆ ಎಂದು ತಿಳಿಸಿದರು. ಹೊಸದಾಗಿ ಕೇಳಿಬರುತ್ತಿರುವ ಆರೋಪಗಳನ್ನು ತಿರಸ್ಕರಿಸಿದ ಆಕೆ,ತನ್ನನ್ನೇಕೆ ಈಗ ಈ ಪ್ರಕರಣದಲ್ಲಿ ಎಳೆದುತರಲಾಗಿದೆ ಎಂದು ಪ್ರಶ್ನಿಸಿದರು.
ಗೌತಮ್ ಅಂತರ್ಧರ್ಮೀಯ ವೇದಿಕೆ ವಿಶ್ವ ಮತ್ತು ಸಾಂಪ್ರದಾಯಿಕ ಧರ್ಮಗಳ ನಾಯಕರ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕಝಕಸ್ತಾನಕ್ಕೆ ತೆರಳಿದ್ದರು ಎಂದು ಅವರ ಪುತ್ರಿ ತಿಳಿಸಿದರು.
ಗೌತಮ್ ಮತ್ತು ರಝಿಯಾ ಉತ್ತರ ಪ್ರದೇಶದ ಫತೇಪುರದಲ್ಲಿಯ ಮೇಲ್ಜಾತಿಯ ಠಾಕೂರ್ ಕುಟುಂಬಗಳಲ್ಲಿ ಜನಿಸಿದ್ದರು. ಗೌತಮ್ 1984ರಲ್ಲಿ ತನ್ನ 20ರ ಪ್ರಾಯದಲ್ಲಿ ಇಸ್ಲಾಮಿಗೆ ಮತಾಂತರಗೊಂಡಿದ್ದರು. ಅದಾಗಲೇ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದ ರಝಿಯಾ 1985ರಲ್ಲಿ ಮದುವೆಯ ಬಳಿಕ ಪತಿಯ ಹಾದಿಯಲ್ಲಿಯೇ ಸಾಗಲು ನಿರ್ಧರಿಸಿದ್ದರು. ‘ನಾವು ಯಾವುದೇ ಧರ್ಮಕ್ಕೆ ಸೇರಲು ಕಾನೂನು ನಮಗೆ ಹಕ್ಕು ನೀಡಿದೆ ’ಎಂದು ರಝಿಯಾ ಹೇಳಿದರು. ನಮ್ಮ ಕುಟುಂಬವು ಇದರಿಂದ ಎಂದೂ ಯಾವುದೇ ಸಮಸ್ಯೆಯನ್ನು ಎದುರಿಸಿರಲಿಲ್ಲ ಎಂದರು.
ಆದರೆ ಗೌತಮ್ ಬಂಧನ ಅವರ ಬಂಧುಗಳಲ್ಲಿ ಶಂಕೆಯನ್ನು ಸೃಷ್ಟಿಸಿದೆ. ಈ ಹಿಂದೆಂದೂ ಧರ್ಮವು ಕುಟುಂಬದಲ್ಲಿ ಯಾವುದೇ ಸಮಸ್ಯೆಗೆ ಕಾರಣವಾಗಿರಲಿಲ್ಲ,ಆದರೆ ಈಗ ಸಮಸ್ಯೆಗಳು ಉದ್ಭವಗೊಂಡಿವೆ. ಕೆಲವು ತೊಡಕುಗಳು ಎದುರಾಗಿವೆ ಎಂದು ರಝಿಯಾ ತಿಳಿಸಿದರು.
Praveen Kumar, a resident of UP's Saharanpur claims he is not aware how is name came up in religious conversion documents. Says was questioned by ATS, police. UP ATS had recently arrested 2 suspects accused of running convertion racket. pic.twitter.com/pPbyWxpPaC
— Piyush Rai (@Benarasiyaa) June 24, 2021