ಪತ್ನಿಯ ಶವ ಸೂಟ್ ಕೇಸ್ ನಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಆರೋಪಿ ಪತಿ ಬಂಧನ

Update: 2021-07-01 14:43 GMT

photoL thenewpost
 

ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿ ಸೂಟ್‌ಕೇಸ್‌ನಲ್ಲಿ 27 ವರ್ಷದ ಟೆಕ್ಕಿಯ ಸುಟ್ಟ ಶವ ಪತ್ತೆಯಾದ ಕೆಲ ದಿನಗಳ ನಂತರ, ಪೊಲೀಸರು ಗುರುವಾರ ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ. ಈತ ಪತ್ನಿಯ ಶವವಿರುವ ಸೂಟ್ ಕೇಸ್ ಎಳೆದೊಯ್ಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು.

ಭುವನೇಶ್ವರಿ ಹೈದರಾಬಾದ್ ನಲ್ಲಿ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಯ ಪತಿ ಶ್ರೀಕಾಂತ್ ರೆಡ್ಡಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಆತನ  ಮೊಬೈಲ್  ನೆಟ್ ವರ್ಕ್  ಮೂಲಕ ವಿಜಯವಾಡದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 23 ರಂದು ರುಯಾ ಆಸ್ಪತ್ರೆಯ ಬಳಿ ಮಹಿಳೆಯೊಬ್ಬರ ಸುಟ್ಟ ಶವ ಪತ್ತೆಯಾದ ಮರುದಿನ ಪೊಲೀಸರು ಅನುಮಾನಾಸ್ಪದವಾಗಿ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದರು.

ರೆಡ್ಡಿ ತನ್ನ ಅಪಾರ್ಟ್ ಮೆಂಟ್ ನಿಂದ ತನ್ನ ಮಗುವಿನೊಂದಿಗೆ ಭಾರವಾದ ಸೂಟ್ ಕೇಸ್ ಅನ್ನು ಹೊತ್ತುಕೊಂಡು ಪ್ರಯಾಣಿಸಿದ್ದಾನೆ ಎಂದು ಟ್ಯಾಕ್ಸಿ ಚಾಲಕ ವಿಚಾರಣೆ ವೇಳೆ ಬಹಿರಂಗಪಡಿಸಿದ್ದ.

ಮಗುವನ್ನು ಕ್ಯಾಬ್‌ನಲ್ಲಿ ಬಿಟ್ಟ ಬಳಿಕ  ಆರೋಪಿ ಶವಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಚಾಲಕ ಆರೋಪಿಸಿದ್ದಾನೆ.

ತನ್ನ ಪತ್ನಿ  ಕೋವಿಡ್‌ನಿಂದ ಮೃತಪಟ್ಟಿದ್ದಾಗಿ  ಪತ್ನಿಯ ಸಂಬಂಧಿಕರಿಗೆ ರೆಡ್ಡಿ ವಿವರಿಸಿದ್ದ. ತರಬೇತಿ ಸಬ್ ಇನ್ಸ್‌ಪೆಕ್ಟರ್,  ಭುವನೇಶ್ವರಿಯ ಸಂಬಂಧಿ ಮಮತಾ ಒದಗಿಸಿದ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಯ ಮೂಲಕ ರೆಡ್ಡಿಯ ಕೃತ್ಯ ಬಯಲಿಗೆ ಬಂದಿತ್ತು.

ರೆಡ್ಡಿ ಸೂಟ್‌ಕೇಸ್ ಅನ್ನು ತನ್ನ ಮನೆಗೆ ತರುವುದು, ಒಂದು ಕೈಯ್ಯಲ್ಲಿ ತನ್ನ ಪುಟ್ಟ ಮಗಳನ್ನು ಹಾಗೂ  ಇನ್ನೊಂದು ಕೈಯಲ್ಲಿ  ದೊಡ್ಡ ಸೂಟ್‌ಕೇಸ್ ಅನ್ನು ಎಳೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ತುಣುಕಿನಲ್ಲಿ ಕಂಡುಬಂದಿದೆ.

ಟ್ಯಾಕ್ಸಿ ಡ್ರೈವರ್‌ನಿಂದ ಪಡೆದ ಮಾಹಿತಿಯೊಂದಿಗೆ ವೀಡಿಯೊ ಸಾಕ್ಷ್ಯಗಳು ರೆಡ್ಡಿ ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಲು  ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ರೆಡ್ಡಿ ತನ್ನ ಹೆಂಡತಿಯನ್ನು ಕೊಂದಿರುವುದನ್ನು ನಿರಾಕರಿಸಿದ್ದ. ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿನ ತಮ್ಮ ಮನೆಯಲ್ಲಿ ಆಕಸ್ಮಿಕವಾಗಿ ನೆಲದ ಮೇಲೆ ಬಿದ್ದಿದ್ದರಿಂದ ಆಕೆಯ  ಸಾವು ಸಂಭವಿಸಿದೆ ಎಂದು ರೆಡ್ಡಿ ಹೇಳಿದ್ದಾಗಿ ಪೊಲೀಸರು ತಿಳಿಸಿದರು.

ಈ ದಂಪತಿ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಭೇಟಿಯಾಗಿದ್ದರು.  ಪತಿಯ ಒತ್ತಾಯದ  ಮೇರೆಗೆ ಭುವನೇಶ್ವರಿಯು ತಿರುಪತಿಗೆ ತೆರಳಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News