ಆಗಸ್ಟ್ 2ನೇ ವಾರದಲ್ಲಿ ಕೋವ್ಯಾಕ್ಸಿನ್ ಕುರಿತು ನಿರ್ಧಾರ: ಡಬ್ಲ್ಯುಎಚ್ಒ
Update: 2021-07-01 21:56 IST
ಹೊಸದಿಲ್ಲಿ, ಜು.1: ಭಾರತ ಬಯೊಟೆಕ್ ತಯಾರಿಕೆಯ ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಒಪ್ಪಿಗೆ ಕುರಿತಂತೆ ಮುಂದಿನ ತಿಂಗಳ ಎರಡನೇ ವಾರದಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಅವರು ಗುರುವಾರ ತಿಳಿಸಿದರು.
ಕಳೆದ ಜನವರಿಯಲ್ಲಿ ಭಾರತೀಯ ಔಷಧಿ ನಿಯಂತ್ರಕರಿಂದ ಅನುಮತಿ ಪಡೆದಿರುವ ಕೋವ್ಯಾಕ್ಸಿನ್ ಆಗಿನಿಂದ ಬಳಕೆಯಾಗುತ್ತಿದೆ. ಅದೀಗ ಡಬ್ಲುಎಚ್ಒನಿಂದ ತುರ್ತು ಬಳಕೆ ಅನುಮತಿಗಾಗಿ ಕಾಯುತ್ತಿದೆ.
ಐರೋಪ್ಯ ಒಕ್ಕೂಟದಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ಗೆ ಅನುಮತಿ ಕುರಿತು ವಿವಾದದ ಬೆನ್ನಲ್ಲೇ ಸ್ವಾಮಿನಾಥನ್ ಅವರ ಈ ಹೇಳಿಕೆ ಹೊರಬಿದ್ದಿದೆ. ಕೋವ್ಯಾಕ್ಸಿನ್ ತುರ್ತು ಬಳಕೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಹಂತದಲ್ಲಿದೆ ಎಂದು ಭಾರತ ಬಯೊಟೆಕ್ನ ಜಂಟಿ ಆಡಳಿತ ನಿರ್ದೇಶಕಿ ಸುಚಿತ್ರಾ ಎಲ್ಲಾ ಅವರು ಬುಧವಾರ ಟ್ವೀಟಿಸಿದ್ದರು.