ಅಫ್ಘಾನಿಸ್ತಾನ: ಬಗ್ರಾಮ್ ವಾಯುನೆಲೆ ತೊರೆದ ಅಮೆರಿಕ, ನ್ಯಾಟೋ ಸೈನಿಕರು
ಕಾಬೂಲ್ (ಅಫ್ಘಾನಿಸ್ತಾನ), ಜು. 2: ಅಫ್ಘಾನಿಸ್ತಾನದ ಅತಿ ದೊಡ್ಡ ವಾಯುನೆಲೆ ಬಗ್ರಾಮ್ನಿಂದ ಅಮೆರಿಕ ಮತ್ತು ನ್ಯಾಟೋದ ಎಲ್ಲ ಸೈನಿಕರು ಹೋಗಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಶುಕ್ರವಾರ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದರೊಂದಿಗೆ ಎರಡು ದಶಕಗಳ ಯುದ್ಧದ ಬಳಿಕ ಅಫ್ಘಾನಿಸ್ತಾನದಿಂದ ವಿದೇಶಿ ಸೈನಿಕರು ಹೊರಹೋಗುವುದು ಖಚಿತವಾದಂತಾಗಿದೆ.
ಅಫ್ಘಾನಿಸ್ತಾನದ ಗುಡ್ಡಗಾಡು ಪ್ರದೇಶಗಳಲ್ಲಿ ತಾಲಿಬಾನ್ ಮತ್ತು ಅಲ್ಖಾಯಿದ ಉಗ್ರರ ವಿರುದ್ಧ ಯುದ್ಧ ನಡೆಸಲು ಈ ವಾಯುನೆಲೆ ವಿದೇಶಿ ಸೈನಿಕರಿಗೆ ಪ್ರಮುಖ ಆಸರೆಯಾಗಿತ್ತು. ಉಗ್ರರ ನೆಲೆಗಳ ಮೇಲೆ ಇಲ್ಲಿಂದಲೇ ವಾಯು ದಾಳಿಗಳನ್ನು ನಡೆಸಲಾಗಿತ್ತು.
‘‘ಎಲ್ಲ ಮಿತ್ರಪಡೆಗಳು ಬಗ್ರಾಮ್ನಿಂದ ಹೊರಹೋಗಿವೆ’’ ಎಂದು ಗುರುತಿಸಲ್ಪಡಲು ಇಚ್ಛಿಸದ ಅಧಿಕಾರಿ ಹೇಳಿದರು. ಆದರೆ, ಕೊನೆಯ ವಿದೇಶಿ ಸೈನಿಕರ ತಂಡ ಈ ನೆಲೆಯನ್ನು ಯಾವಾಗ ತೊರೆಯಿತು ಎನ್ನುವುದನ್ನು ತಿಳಿಸಲು ಅವರು ನಿರಾಕರಿಸಿದರು. ಬಗ್ರಾಮ್ ವಾಯು ನೆಲೆಯು ರಾಜಧಾನಿ ಕಾಬೂಲ್ನಿಂದ ಉತ್ತರಕ್ಕೆ 50 ಕಿಲೋಮೀಟರ್ ದೂರದಲ್ಲಿದೆ.
ಈ ನೆಲೆಯನ್ನು ಅಫ್ಘಾನ್ ಪಡೆಗಳೀಗೆ ಯಾವಾಗ ಅಧಿಕೃತವಾಗಿ ಹಸ್ತಾಂತರಿಸಲಾಗುವುದು ಎನ್ನುವುದನ್ನೂ ಅವರು ತಿಳಿಸಲಿಲ್ಲ. ಆದರೆ, ನೆಲೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಸರಕಾರದ ಅಧಿಕಾರಿಗಳು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯದ ವಕ್ತಾರ ರುಹುಲ್ಲಾ ಅಹ್ಮದ್ಝಾಯ್ ತಿಳಿಸಿದರು.