ಗ್ರಾಮದ ಬಾವಿಯನ್ನು ಬಳಸಿದ್ದಕ್ಕೆ ಬ್ರಾಹ್ಮಣರಿಂದ ದಾಳಿ: ಭಯದಲ್ಲಿ ಬದುಕುತ್ತಿರುವ ದಲಿತ ಸಮುದಾಯ

Update: 2021-07-02 16:09 GMT
Photo: Thewire.in

ಜಮ್ಮು, ಜು.2: ಜಮ್ಮು-ಕಾಶ್ಮೀರದ ಉಧಮಪುರ ಜಿಲ್ಲೆಯ ಮಲರ್ ಗ್ರಾಮದಲ್ಲಿಯ ದಲಿತ ಮಹಶಾ ಸಮುದಾಯದ ಸದಸ್ಯರು ಜೂ.9ರಂದು ರಾತ್ರಿ ಶಸ್ತ್ರಸಜ್ಜಿತರಾಗಿದ್ದ ಬ್ರಾಹ್ಮಣ ಸಮುದಾಯದವರು ತಮ್ಮ ಮೇಲೆ ದಾಳಿ ನಡೆಸಿದಾಗಿನಿಂದ ನಿರಂತರ ಭಯದಲ್ಲಿಯೇ ಬದುಕುತ್ತಿದ್ದಾರೆ‌ ಎಂದು thewire.in ವರದಿ ಮಾಡಿದೆ. 

ಪೊಲೀಸರು ಕಠಿಣ ಎಸ್/ಎಸ್ಟಿ ಕಾಯ್ದೆಯ ಬದಲು ಐಪಿಸಿಯಡಿ ಪ್ರಕರಣವನ್ನು ದಾಖಲಿಸಿಕೊಂಡು, ತಾವು ಮೇಲ್ಜಾತಿಗಳ ಪರವೇ ಇದ್ದೇವೆ ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ. ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ಈಗಲೂ ಮಹಶಾ ಸಮುದಾಯದವರು ಎದುರಾದರೆ ಜಾತಿ ನಿಂದನೆಯನ್ನು ಮಾಡುತ್ತಲೇ ಇದ್ದಾರೆ. ಕೆಲವೇ ದಿನಗಳಲ್ಲಿ ಪ್ರಕರಣ ಮೂಲೆಗುಂಪಾದರೆ ಅಚ್ಚರಿಯೇನಿಲ್ಲ.

photo: thewire.in

ದಲಿತರ ಮೇಲೆ ದಾಳಿ ನಡೆಯುವ ನಾಲ್ಕು ದಿನಗಳ ಮೊದಲು ಇಬ್ಬರು ದಲಿತ ಮಹಿಳೆಯರು ಗ್ರಾಮದಲ್ಲಿಯ ‘ಪಾಂಡವರ ಬಾವಿ’ಯಿಂದ ನೀರು ಎತ್ತುವುದನ್ನು ಮೂವರು ಬ್ರಾಹ್ಮಣ ವ್ಯಕ್ತಿಗಳು ತಡೆದಿದ್ದರು.

ಜೂ.9ರಂದು ನಮ್ಮ ಸಮುದಾಯದವರ ಮೇಲೆ ದಾಳಿ ನಡೆದಾಗಿನಿಂದಲೂ ಸಂಜೆಯ ಬಳಿಕ ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿದ್ದೇವೆ ಎಂದು ದಾಳಿಯಲ್ಲಿ ಗಾಯಗೊಂಡಿದ್ದ ರಾಜಕುಮಾರಿ ಸುದ್ದಿಗಾರರಿಗೆ ತಿಳಿಸಿದರು. ರಾಜಕುಮಾರಿಯ ಪತಿ ಸೋಮರಾಜ,ಪುತ್ರ ಮತ್ತು ಮೈದುನ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ದಲಿತ ಸಮುದಾಯದ ಇತರ ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು ಎಂದು ವರದಿ ತಿಳಿಸಿದೆ.

ಮಲರ್ ಗ್ರಾಮದಲ್ಲಿ ಮಹಶಾ ಸಮುದಾಯಕ್ಕೆ ಸೇರಿದ 25 ಕುಟುಂಬಗಳಿದ್ದರೆ ಮೂರೋ ನಾಲ್ಕೋ ಬ್ರಾಹ್ಮಣರ ಮನೆಗಳಿವೆ. ಆದರೆ ಲಾಗಾಯ್ತಿನಿಂದಲೂ ಈ ಶ್ರೀಮಂತ ಬ್ರಾಹ್ಮಣರು ಗ್ರಾಮದಲ್ಲಿ ಪ್ರಾಬಲ್ಯವನ್ನು ಮೆರೆಯುತ್ತ ಬಂದಿದ್ದಾರೆ. ಇಲ್ಲಿ ಬ್ರಾಹ್ಮಣರು ಆಗಾಗ್ಗೆ ದಲಿತರಿಗೆ ಜಾತಿ ನಿಂದನೆಯನ್ನು ಮಾಡುತ್ತಲೇ ಇದ್ದಾರೆ. ನೀವು ಬ್ರಾಹ್ಮಣರ ವಿರುದ್ಧ ಹೋರಾಡಲು ಹೇಗೆ ಸಾಧ್ಯ? ಕಾನೂನುಗಳು ಮತ್ತು ಕಾನೂನು ಜಾರಿ ಅಧಿಕಾರಿಗಳೂ ನಮ್ಮವರೇ ಆಗಿದ್ದಾರೆ ಎಂದು ಅವರು ದಲಿತರನ್ನು ಅಣಕಿಸುವುದು ಸಾಮಾನ್ಯವಾಗಿದೆ.

18 ತಿಂಗಳುಗಳ ಹಿಂದೆ ಗ್ರಾಮದಲ್ಲಿ ನಲ್ಲಿನೀರಿನ ಪೂರೈಕೆಗಾಗಿ ಕೊಳವೆಗಳನ್ನು ಅಳವಡಿಸುತ್ತಿದ್ದಾಗ ಅವು ತಮ್ಮ ಹೊಲಗಳ ಮೂಲಕ ಹಾದು ಹೋಗುವುದನ್ನು ಬ್ರಾಹ್ಮಣರು ವಿರೋಧಿಸಿದ್ದರು. ಹೀಗಾಗಿ ಅಧಿಕಾರಿಗಳು ದಲಿತರ ಅನುಮತಿಯೊಂದಿಗೆ ಅವರ ಹೊಲಗಳ ಮೂಲಕ ಕೊಳವೆಗಳನ್ನು ಅಳವಡಿಸಿದ್ದರು. ಯೋಜನೆಯು ಅರ್ಧ ಪೂರ್ಣಗೊಳ್ಳುವ ವೇಳೆಗೆ ಅರ್ಧದಷ್ಟು ದಲಿತ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಲಭ್ಯವಾಗಿತ್ತು. 

ಈ ಸಂದರ್ಭ ಬ್ರಾಹ್ಮಣರು ನೀರನ್ನು ತಮ್ಮ ಮನೆಗಳಿಗೆ ತಿರುಗಿಸಲು ಕೊಳವೆಗಳನ್ನು ಹಾಕಲಾಗಿದ್ದ ಸೋಮರಾಜನ ಹೊಲವನ್ನು ಅಗೆದಿದ್ದರು. ಆದರೆ ದಲಿತರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಇದು ಬ್ರಾಹ್ಮಣರನ್ನು ಕೆರಳಿಸಿದ್ದು,ಆಗಿನಿಂದ ದಲಿತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಖಿಲ ಜಮ್ಮು-ಕಾಶ್ಮೀರ ಮಹಶಾ ಸದರ್ ಸಭಾದ ಉಪಾಧ್ಯಕ್ಷ ಸೋಮ ರಾಜ್ ಕುಂಡಲ್ thewire ಸುದ್ದಿಸಂಸ್ಥೆಗೆ ತಿಳಿಸಿದರು. ಘಟನಾವಳಿಗಳನ್ನು ಗ್ರಾಮದ ಸರಪಂಚ ಉತ್ತಮಸಿಂಗ್ ಅವರೂ ದೃಢಪಡಿಸಿದರು.

 ಜೂ.5ರಂದು ದಲಿತ ಸಮುದಾಯದ ಚಂಚಲಾ ದೇವಿ ಮತ್ತು ರಾಜಕುಮಾರಿ ಪಾಂಡವರ ಬಾವಿಯಿಂದ ನೀರೆತ್ತಲು ತೆರಳಿದ್ದಾಗ ದಲಿತರ ವಿರುದ್ಧದ ಬ್ರಾಹ್ಮಣರ ಆಕ್ರೋಶ ಸ್ಫೋಟಗೊಂಡಿತ್ತು. ಬ್ರಾಹ್ಮಣ ಸಮುದಾಯದ ಅಖಿಲ್ ಶರ್ಮಾ, ಮೋಹನ್ ಲಾಲ್ ಮತ್ತು ದರ್ಶನ್ ಕುಮಾರ್ ಎನ್ನುವವರು ಅವರನ್ನು ನೀರೆತ್ತುವುದನ್ನು ತಡೆದಿದ್ದರು.

ಅದೇ ವೇಳೆ ಬಾವಿಯ ಬಳಿಯಲ್ಲಿದ್ದ ಗ್ರಾಮದ ಇನ್ನೋರ್ವ ಬ್ರಾಹ್ಮಣ ವ್ಯಕ್ತಿ,ಜಾತಿ ತಾರತಮ್ಯದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಈ ಮೂವರಿಗೂ ಎಚ್ಚರಿಕೆ ನೀಡಿದ್ದ,‌ ಆದರೆ ಆರೋಪಿಗಳು ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲ. 

ಹೆಚ್ಚಿನ ಸಂಘರ್ಷಕ್ಕೆ ಅವಕಾಶವಾಗದಂತೆ ಮಹಿಳೆಯರಿಬ್ಬರೂ ಖಾಲಿಕೊಡಗಳೊಂದಿಗೆ ಮನೆಗೆ ವಾಪಸಾಗಿದ್ದರು. ಆಗಿನಿಂದ ದಲಿತ ಸಮುದಾಯದವರು ಪಾಂಡವರ ಬಾವಿಯಿಂದ ನೀರು ಎತ್ತುತ್ತಿಲ್ಲ,ಗ್ರಾಮದಲ್ಲಿಯ ಇನ್ನೊಂದು ಸಣ್ಣ ಬಾವಿಯನ್ನು ಬಳಸುತ್ತಿದ್ದಾರೆ. ನಾಲ್ಕು ದಿನಗಳ ಬಳಿಕ ಜೂ.9ರಂದು ರಾತ್ರಿ 11 ಗಂಟೆಯ ಸುಮಾರಿಗೆ ಸೋಮರಾಜ್-ರಾಜಕುಮಾರಿ ಮನೆಗೆ ನುಗ್ಗಿದ್ದ ದರ್ಶನ ನೇತೃತ್ವದ ಬ್ರಾಹ್ಮಣರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ನೆರವಿಗೆ ಬಂದಿದ್ದ ಇತರರ ಮೇಲೂ ದಾಳಿ ನಡೆಸಿತ್ತು ಎಂದು ವರದಿ ಉಲ್ಲೇಖಿಸಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದರ್ಶನ ತಾನೆಂದೂ ದಲಿತರನ್ನು ನಿಂದಿಸಿಲ್ಲ, ಜೂ.9ರಂದು ರಾತ್ರಿ ತಾನು ತನ್ನ ಹೊಲಕ್ಕೆ ನುಗ್ಗಿ ಬೆಳೆಯನ್ನು ಹಾಳುಮಾಡುತ್ತಿದ್ದ ಸೋಮರಾಜನ ಜಾನುವಾರನ್ನು ಮರಳಿಸಲು ಆತನ ಮನೆಗೆ ತೆರಳಿದ್ದೆ ಹೊರತು ದಾಳಿ ನಡೆಸಲು ಅಲ್ಲ. ಈ ವೇಳೆ ದಲಿತರು ತನಗೆ,ತನ್ನ ಪತ್ನಿ ಮತ್ತು ಪುತ್ರನಿಗೆ ಹಲ್ಲೆ ನಡೆಸಿದ್ದರು ಎಂದು ಹೇಳಿಕೊಂಡಿದ್ದಾನೆ. ದಾಳಿಯಲ್ಲಿ ದಲಿತರು ಗಾಯಗೊಂಡಿದ್ದಕ್ಕೆ ಸಾಕ್ಷಿಯಾಗಿ ಫೋಟೊಗಳಿವೆ,ಆದರೆ ದರ್ಶನ ಬಳಿ ಯಾವುದೇ ಫೋಟೊಗಳಿಲ್ಲ.
ಬ್ರಾಹ್ಮಣ ಸಮುದಾಯದವರೂ ದಲಿತರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ದರ್ಶನ್ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News