ನನ್ನ ಬಿಡುಗಡೆಯಾಗಿದೆ, ಹೀಗಾಗಿ ಅಮಿತ್ ಶಾ ರಾಜೀನಾಮೆ ನೀಡಬೇಕು: ಅಖಿಲ್ ಗೊಗೊಯಿ‌

Update: 2021-07-03 14:10 GMT

ಗುವಾಹಟಿ,ಜು.3: ‘ನನ್ನ ಬಿಡುಗಡೆಯಾಗಿದೆ,ಹೀಗಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು’ ಎಂದು ಗುರುವಾರವಷ್ಟೇ 18 ತಿಂಗಳ ಜೈಲುವಾಸದಿಂದ ಮುಕ್ತರಾಗಿರುವ ಅಸ್ಸಾಮಿನ ಸಾಮಾಜಿಕ ಹೋರಾಟಗಾರ ಹಾಗೂ ಶಿವಸಾಗರ ಶಾಸಕ ಅಖಿಲ್ ಗೊಗೊಯಿ ಅವರು ಹೇಳಿದ್ದಾರೆ.

ಸರಕಾರದ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸಲು ದುರ್ಬಳಕೆಯಾಗುತ್ತಿದೆ ಎಂಬ ವ್ಯಾಪಕ ಟೀಕೆಗೊಳಗಾಗಿರುವ ಕರಾಳ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲ್ಪಟ್ಟು ಇದೀಗ ವಿಶೇಷ ಎನ್ಐಎ ನ್ಯಾಯಾಲಯದಿಂದ ದೋಷಮುಕ್ತರಾಗಿರುವ ಗೊಗೊಯಿ ಸುದ್ದಿ ಜಾಲತಾಣ The Wire ಗೆ ನೀಡಿರುವ ಸಂದರ್ಶನದಲ್ಲಿ ತನ್ನ ಭವಿಷ್ಯದ ಯೋಜನೆಗಳು,ತಾನು ಜೈಲಿನಲ್ಲಿದ್ದಾಗ ಆಗಿರುವ ಬದಲಾವಣೆಗಳು ಹಾಗೂ ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಬಲಾಢ್ಯ ಬಿಜೆಪಿಯ ವಿರುದ್ಧ ತನ್ನ ಉದ್ದೇಶಿತ ಹೋರಾಟಗಳ ಕುರಿತು ಬಿಚ್ಚುಮನಸ್ಸಿನಿಂದ ಮಾತನಾಡಿದ್ದಾರೆ.

ತಾನು ಕಂಬಿಗಳ ಹಿಂದಿದ್ದ 18 ತಿಂಗಳುಗಳನ್ನು ಬಿಜೆಪಿ ತನ್ನ ಲಾಭಕ್ಕಾಗಿ ಸಮರ್ಪಕವಾಗಿ ಬಳಸಿಕೊಂಡಿದೆ ಎಂದ ಗೊಗೊಯಿ,‘ನಾನು ಜೈಲಿನಲ್ಲಿದ್ದ ಅವಧಿಯಲ್ಲಿ ಮೂರು ಐತಿಹಾಸಿಕ ಘಟನೆಗಳು ನಡೆದುಹೋಗಿವೆ. ಮೊದಲನೆಯದಾಗಿ ಅಸ್ಸಾಮಿ ಸಮಾಜದ ವಿವಿಧ ಸ್ತರಗಳ ಜನರನ್ನು ಕ್ರೋಢೀಕರಿಸುವಲ್ಲಿ ಅಷ್ಟೊಂದು ಯಶಸ್ವಿಯಾಗಿದ್ದ ಸಿಎಎ ವಿರುದ್ಧದ ಪ್ರತಿಭಟನೆಯನ್ನು ಬಿಜೆಪಿಯು ಸಂಪೂರ್ಣವಾಗಿ ದಮನಿಸಿದೆ. 

ಎರಡನೆಯದಾಗಿ 2021ರಲ್ಲಿ ಅಸ್ಸಾಮಿನಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೂರನೆಯದಾಗಿ ಅಸ್ಸಾಮಿ ರಾಷ್ಟ್ರೀಯ ವಾದವನ್ನು ಬಗ್ಗುಬಡಿಯಲು ಅದು ಎಲ್ಲ ಚಟುವಟಿಕೆಗಳನ್ನು ಹೆಚ್ಚಿಸಿತ್ತು. ಜೈಲುವಾಸದಿಂದ ವ್ಯರ್ಥವಾಗಿರುವ 18 ತಿಂಗಳುಗಳನ್ನು ಸರಿದೂಗಿಸಲು ನಮ್ಮ ರೈಜೋರ್ ದಳವು ಫ್ಯಾಸಿಸ್ಟ್ ಶಕ್ತಿಗಳಾದ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಪಟ್ಟುಹಿಡಿದು ಹೋರಾಡಬೇಕಿದೆ. ನಾವು ಕೆಲವು ವಿಷಯಗಳ ಪರಿಕಲ್ಪನೆಯನ್ನು ಮಾಡಬೇಕಿದೆ ಮತ್ತು ಈ ಹೋರಾಟಕ್ಕೆ ನಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಬೇಕಿದೆ ’ ಎಂದು ಹೇಳಿದರು.

ಕೋಮುವಾದಿ ಫ್ಯಾಸಿಸ್ಟ್ ಪಕ್ಷವಾಗಿರುವ ಬಿಜೆಪಿ ಮತ್ತು ಕೋಮುವಾದಿ ಮೂಲಭೂತವಾದಿ ಪಕ್ಷ ಎಐಯುಡಿಎಫ್ ಇವುಗಳನ್ನು ಕಿತ್ತೊಗೆಯುವುದು ಅಸ್ಸಾಮಿನ ಪ್ರಜಾಪ್ರಭುತ್ವೀಕರಣದತ್ತ ಮೊದಲ ಹೆಜ್ಜೆಯಾಗಲಿದೆ. ಅಸ್ಸಾಮಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಿಂದ ಈ ಪಕ್ಷಗಳನ್ನು ತೆಗೆದುಹಾಕುವುದು ಮತ್ತು ಹೊಸ ಉದಾರವಾದಿ ಪ್ರಜಾಸತ್ತಾತ್ಮಕ ರಾಜಕೀಯ ವಾತಾವರಣವನ್ನು ಮೂಡಿಸುವುದು ಮೊದಲ ಮತ್ತು ಅತ್ಯಂತ ಮುಖ್ಯ ಕರ್ತವ್ಯವಾಗಿದೆ ಎಂದ ಗೊಗೊಯಿ ‘ಅಲ್ಪಸಂಖ್ಯಾತರಿಂದು ಅನಿವಾರ್ಯವಾಗಿ ಎಐಯುಡಿಎಫ್ ಜೊತೆಯಲ್ಲಿದ್ದಾರೆ. ನಾವು ಸಂಪೂರ್ಣ ಮತ್ತು ನಿಜವಾದ ಜಾತ್ಯತೀತ,ಪ್ರಜಸತ್ತಾತ್ಮಕ ಮತ್ತು ಪ್ರಗತಿಪರ ರಾಜಕೀಯ ಪಕ್ಷವಾಗಿ ತಲೆಯೆತ್ತಿದಾಗ ಎಲ್ಲ ಅಲ್ಪಸಂಖ್ಯಾತರು ನಮ್ಮೆಡೆಗೆ ಬರುತ್ತಾರೆ ’ ಎಂದರು.

ನಿಮ್ಮ ನಿಲುವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಬಿಜೆಪಿಯ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ನಿಮ್ಮಂತೆಯೇ ‘ಮಾವೋವಾದಿ’ಎಂಬ ಹಣೆಪಟ್ಟಿಯೊಂದಿಗೆ ಜೈಲು ಸೇರಿರುವ ಸುಧಾ ಭಾರದ್ವಾಜ್, ಸ್ಟಾನ್ ಸ್ವಾಮಿ ಮತ್ತು ಇತರರಿಗೆ ನೀವೇನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಗೊಗೊಯಿ,ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರರ ವಿರುದ್ಧದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತವಾಗಿವೆ. ಗುವಾಹಟಿಯಲ್ಲಿನ ನ್ಯಾಯಾಂಗದಂತೆ ಸ್ವತಂತ್ರ ನ್ಯಾಯಾಂಗವಿದ್ದರೆ ಈ ಎಲ್ಲ ಹೋರಾಟಗಾರರು ಖಂಡಿತ ಬಿಡುಗಡೆಗೊಳ್ಳುತ್ತಾರೆ. ವಿಷಾದವೆಂದರೆ ಕೆಲವು ಪ್ರಕರಣಗಳಲ್ಲಿ ನ್ಯಾಯಾಂಗದ ದೌರ್ಬಲ್ಯದಿಂದಾಗಿ ಕೆಲವು ಹೋರಾಟಗಾರರು ಇನ್ನೂ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇದನ್ನು ಕೇವಲ ಕಾನೂನು ಸಮರವಲ್ಲ,ರಾಜಕೀಯ ಸಮರವಾಗಿಯೂ ಹೋರಾಡಲು ದೃಢಸಂಕಲ್ಪದ, ಪ್ರಾಮಾಣಿಕ ವಕೀಲರ ನೆರವು ಪಡೆಯುವಂತೆ ಅವರನ್ನು ಕೋರಿಕೊಳ್ಳಲು ಬಯಸುತ್ತೇನೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ತನ್ನನ್ನು ಬಿಡುಗಡೆಗೊಳಿಸಿರುವ ನ್ಯಾಯಾಲಯದ ಗುರುವಾರದ ತೀರ್ಪು ಪೂರ್ವನಿದರ್ಶನವೊಂದನ್ನು ಸ್ಥಾಪಿಸಿದೆ ಹಾಗೂ ದೇಶದ್ರೋಹ ಆರೋಪ ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿತರಾಗಿರುವ ಇತರ ಹೋರಾಟಗಾರರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಭಾರತೀಯ ರಾಜಕೀಯದಲ್ಲಿನ ಪ್ರಸ್ತುತ ಸನ್ನಿವೇಶದ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಗೊಗೊಯಿ,‘ದೇಶದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ನಾವೀಗ ನೋಡುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿಯ ತೀವ್ರತೆ 1975-77ರ ಘೋಷಿತ ತುರ್ತು ಪರಿಸ್ಥಿತಿಗಿಂತ ಕಡಿಮೆಯೇನಿಲ್ಲ. ಮೋದಿ ಭಾರತವನ್ನು ಪ್ರಜಾಪ್ರಭುತ್ವ ವಿರೋಧಿ,ತಿರೋಗಾಮಿ,ನಿರಂಕುಶ ಮತ್ತು ಫ್ಯಾಸಿಸ್ಟ್ ದೇಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಾಗಾಗಲು ನಾವು ಬಿಡುವುದಿಲ್ಲ. ಹೀಗಾಗಿ ನನ್ನನ್ನು ಬಂಧನದಲ್ಲಿಟ್ಟರೂ ಅಥವಾ ನನಗೆ ಗುಂಡಿಕ್ಕಿದರೂ ಭಾರತವನ್ನು ಫ್ಯಾಸಿಸ್ಟ್ ದೇಶವನ್ನಾಗಿ ಪರಿವರ್ತಿಸುವ ಮೋದಿಯ ಕನಸಿಗೆ ನಾನು ಸದಾ ಸವಾಲೊಡ್ಡುತ್ತಲೇ ಇರುತ್ತೇನೆ ’ಎಂದು ಉತ್ತರಿಸಿದರು.
 
ಕೋವಿಡ್ ಕುರಿತಂತೆ ಗೊಗೊಯಿ,ಸಾಂಕ್ರಾಮಿಕವನ್ನು ನಿರ್ವಹಿಸುವಲ್ಲಿ ಮೋದಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಾಂಕ್ರಾಮಿಕವನ್ನು ನಿಯಂತ್ರಿಸಲು ಅಥವಾ ಎದುರಿಸಲು,ವಲಸೆ ಕಾರ್ಮಿಕರಿಗಾಗಿ ಯಾವುದೇ ದೃಢವಾದ ವ್ಯವಸ್ಥೆಗಳನ್ನು ಮಾಡಲು,ಲಸಿಕೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬಿಜೆಪಿ ಅಸಮರ್ಥವಾಗಿದೆ. ಮೋದಿ ಕೇವಲ ಭಾಷಣಶೂರರು ಎನ್ನುವುದನ್ನು ಇವೆಲ್ಲ ಸಾಬಿತುಗೊಳಿಸಿವೆ. ಅವರೊಂದು ದೊಡ್ಡ ಝೀರೊ ಎಂದು ತಾನು ಭಾವಿಸಿದ್ದೇನೆ. ಅವರಿಗೆ ಯೋಜನೆ ರೂಪಿಸುವುದು ಗೊತ್ತಿಲ್ಲ,ಅವರು ಆದೇಶವನ್ನು ಮಾತ್ರ ನೀಡಬಲ್ಲರು,ಅದರ ಅನುಷ್ಠಾನದಲ್ಲಿ ವಿಫಲಗೊಳ್ಳುತ್ತಾರೆ ಎಂದರು.

‘ಅಮಿತ್ ಶಾ ಮತ್ತು ಅವರ ಸಚಿವಾಲಯ ಎಲ್ಲ ಎನ್ಐಎ ಮತ್ತು ಯುಎಪಿಎ ಪ್ರಕರಣಗಳನ್ನು ನಿರ್ವಹಿಸಿದ್ದರಿಂದ ನನ್ನನ್ನು ಬಿಡುಗಡೆಗೊಳಿಸಿರುವ ವಿಶೇಷ ಎನ್ಐಎ ನ್ಯಾಯಾಲಯದ ತೀರ್ಪಿನ ಬಳಿಕ ಶಾ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ನಾನು ಭಾವಿಸಿದ್ದೇನೆ. ಈ ಐತಿಹಾಸಿಕ ತೀರ್ಪಿನ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಮಹಾನಿರ್ದೇಶಕರು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೂ ತಮ್ಮ ಹುದ್ದೆಗಳಿಂದ ಕೆಳಗಿಳಿಯಬೇಕು ಎಂದು ಗೊಗೊಯಿ ಹೇಳಿದರು.
 
ಆಪ್ನ ಜನನಕ್ಕೆ ಕಾರಣವಾದ ದಿಲ್ಲಿಯಲ್ಲಿನ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ನೀವೂ ಭಾಗಿಯಾಗದ್ದೀರಿ. ಈಗ ನೀವೂ ರಾಜಕೀಯ ಪಕ್ಷವನ್ನು ಹೊಂದಿದ್ದೀರಿ. ದಿಲ್ಲಿಯಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಿರುವ ಆಪ್ ಜೊತೆ ನಂಟು ಹೊಂದಿರುತ್ತಿರಾ ಎಂಬ ಪ್ರಶ್ನೆಗೆ ಗೊಗೊಯಿ,ಆಪ್ ಮತ್ತು ತೃಣಮೂಲ ಕಾಂಗ್ರೆಸ್ ಜೊತೆ ತಾನು ಖಂಡಿತ ಮಾತನಾಡುತ್ತೇನೆ. ಅರವಿಂದ ಕೇಜ್ರಿವಾಲ್ ಮತ್ತು ಮನೀಷ್ ಸಿಸೋದಿಯಾ ಇಬ್ಬರೂ ತನ್ನ ಸ್ನೇಹಿತರಾಗಿದ್ದಾರೆ. ಅವರೊಂದಿಗೆ ಮಾತನಾಡಿದ ಬಳಿಕ ಮಮತಾ ದೀದಿ ಜೊತೆ ಮಾತನಾಡುತ್ತೇನೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News