ಕೋಪಾ ಅಮೆರಿಕ: ಅರ್ಜೆಂಟೀನ ಸೆಮಿ ಫೈನಲ್ ಗೆ ಲಗ್ಗೆ
photo:twitter@mavegol
ಗೋಯಾನಿಯಾ: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗಳಿಸಿದ ಏಕೈಕ ಗೋಲು ಸಹಾಯದಿಂದ ಇಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಈಕ್ವೆಡಾರ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನ ಕೋಪಾ ಅಮೆರಿಕಾ ಫಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿತು.
ಮಂಗಳವಾರ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಅರ್ಜೆಂಟೀನ ತಂಡವು ಕೊಲಂಬಿಯಾ ವಿರುದ್ಧ ಆಡಲಿದ., ಕೊಲಂಬಿಯಾ ತಂಡ ಮತ್ತೊಂದು ಕ್ವಾರ್ಟರ್ ಫೈನಲ್ ನಲ್ಲಿ ಪೆನಾಲ್ಟಿ ಶೂಟ್ಔಟ್ ಮೂಲಕ ಉರುಗ್ವೆ ತಂಡವನ್ನು ಸೋಲಿಸಿತ್ತು.
ರೊಡ್ರಿಗೊ ಡಿ ಪಾಲ್ ಹಾಗೂ ಲೌಟಾರೊ ಮಾರ್ಟಿನೆಝ್ ಅವರಿಗೆ ಗೋಲು ಗಳಿಸಲು ಅವಕಾಶ ಸೃಷ್ಟಿಸಿಕೊಟ್ಟಿದ್ದ ಮೆಸ್ಸಿ ಇಂಜುರಿ ಟೈಮ್ ನಲ್ಲಿ ಫ್ರೀ-ಕಿಕ್ ಮೂಲಕ ಬೆರಗುಗೊಳಿಸಿದರು.
ರೊಡ್ರಿಗೊ ಡಿ ಪಾಲ್ 40ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಮಾರ್ಟಿನೆಝ್ ಅವರು 84ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಅರ್ಜೆಂಟೀನದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಮೆಸ್ಸಿ 93ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅರ್ಜೆಂಟೀನಕ್ಕೆ 3-0 ಅಂತರದ ಗೆಲುವು ತಂದುಕೊಟ್ಟರು.
ಪೆಡ್ರೊ ಹಿಕಾಪಿ ಹೆಚ್ಚುವರಿ ಅವಧಿಯಲ್ಲಿ(90+2) ರೆಡ್ ಕಾರ್ಡ್ ಪಡೆದ ಕಾರಣ 10 ಆಟಗಾರರೊಂದಿಗೆ ಆಡಿದ ಈಕ್ವೆಡಾರ್ 0-3 ಅಂತರದಿಂದ ಸೋತಿದ್ದರೂ ಪಂದ್ಯದುದ್ದಕ್ಕೂ ಸ್ಪರ್ಧಾತ್ಮಕವಾಗಿತ್ತು.