50 ವರ್ಷಗಳ ಅಂತರದಲ್ಲಿ ಬಿಸಿ ಗಾಳಿಯಿಂದಾಗಿ ಭಾರತದಲ್ಲಿ 17,000ಕ್ಕೂ ಹೆಚ್ಚು ಮಂದಿ ಸಾವು

Update: 2021-07-04 18:14 GMT

ಹೊಸದಿಲ್ಲಿ, ಜು.4: ದೇಶದಲ್ಲಿ 1971ರಿಂದ 2019ರವರೆಗಿನ ಅವಧಿಯಲ್ಲಿ 706 ಬಿಸಿಗಾಳಿಯ ಪ್ರಕರಣ ವರದಿಯಾಗಿದ್ದು 17,362 ಮಂದಿ ಬಲಿಯಾಗಿದ್ದಾರೆ ಎಂದು ದೇಶದ ಉನ್ನತ ಹವಾಮಾನ ಶಾಸ್ತ್ರಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ಅವಧಿಯಲ್ಲಿ ಗಂಭೀರ ಹವಾಮಾನ ಪರಿಸ್ಥಿತಿ(ಇಡಬ್ಲ್ಯೂಇ)ಗೆ ದೇಶದಲ್ಲಿ 1,41,308 ಮಂದಿ ಬಲಿಯಾಗಿದ್ದಾರೆ. ಬಿಸಿಗಾಳಿಯೂ ಇಡಬ್ಲ್ಯೂಇಯ ಒಂದು ರೂಪವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ ರಾಜೀವನ್ , ವಿಜ್ಞಾನಿಗಳಾದ ಕಮಲಜೀತ್ ರೇ, ಎಸ್‌ಎಸ್ ರೇ, ಆರ್‌ಕೆ ಗಿರಿ ಮತ್ತು ಎಪಿ ದಿಮ್ರಿ ಈ ಅಧ್ಯಯನ ವರದಿ ಪ್ರಕಟಿಸಿದ್ದಾರೆ. ಬಿಸಿಗಾಳಿಯಿಂದ ಅತ್ಯಧಿಕ ಸಾವು ಸಂಭವಿಸಿದ್ದು ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲಿ. ಕೋರ್ ಹೀಟ್‌ವೇವ್ ಝೋನ್(ಸಿಎಚ್‌ಝೆಡ್) ವ್ಯಾಪ್ತಿಯಲ್ಲಿರುವವರು ಬಿಸಿಗಾಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯಿದ್ದು ಬಿಸಿಗಾಳಿಯ ಸಮಸ್ಯೆ ಮೇ ತಿಂಗಳಿನಲ್ಲಿ ಹೆಚ್ಚಿರುತ್ತದೆ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದಿಲ್ಲಿ, ಹರ್ಯಾನ, ರಾಜಸ್ತಾನ, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಸಿಎಚ್‌ಝೆಡ್ ವ್ಯಾಪ್ತಿಯಲ್ಲಿವೆ. ಉತ್ತರ ಗೋಳಾರ್ಧದ ವಿವಿಧೆಡೆ ಬಿಸಿಗಾಳಿಯ ವಿಪತ್ತಿನ ಹಲವು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ವರದಿ ಮಹತ್ವದ್ದಾಗಿದೆ. ಈ ವಾರದ ಆರಂಭದಲ್ಲಿ ಕೆನಡಾದ ಕೆಲವೆಡೆ ಮತ್ತು ಉತ್ತರ ಅಮೆರಿಕದಲ್ಲಿ ಬೀಸಿದ ಬಿರುಗಾಳಿಗೆ ಹಲವರು ಬಲಿಯಾಗಿದ್ದಾರೆ. ಕೆನಡಾದ ವ್ಯಾಂಕುವರ್‌ನಲ್ಲಿ 49 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕ ದಾಖಲೆ ತಾಪಮಾನ ದಾಖಲಾಗಿತ್ತು.

ಭಾರತದಲ್ಲೂ ಈ ವಾರ ಹಲವೆಡೆ 40 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News