×
Ad

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಪೋರ್ಟಲ್‌ನಲ್ಲಿ 2 ತಿಂಗಳಲ್ಲೇ 1,276 ದೂರು ಸಲ್ಲಿಕೆ

Update: 2021-07-04 23:54 IST

ಹೊಸದಿಲ್ಲಿ, ಜು.4: ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಂತರ್ಜಾಲ ಕುಂದುಕೊರತೆ ಪೋರ್ಟಲ್ ಆರಂಭವಾದ 2 ತಿಂಗಳಲ್ಲೇ 1,276 ದೂರುಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಅರ್ಧಕ್ಕೂ ಹೆಚ್ಚು ದೂರುಗಳು ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಆಯೋಗ ಹೇಳಿದೆ. ಆಯೋಗಕ್ಕೆ ಸಲ್ಲಿಕೆಯಾಗುವ ವ್ಯಕ್ತಿಗತ ದೂರಿನ ಜತೆಗೆ, ಆನ್‌ಲೈನ್ ಮೂಲಕವೂ ದೂರು, ಸಲಹೆ ಸಲ್ಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಪೋರ್ಟಲ್‌ಗೆ 2021ರ ಎಪ್ರಿಲ್ 14ರಂದು ಚಾಲನೆ ನೀಡಲಾಗಿತ್ತು. ಜೂನ್ 28ರವರೆಗಿನ ಮಾಹಿತಿಯಂತೆ, ಒಟ್ಟು 1,276 ದೂರುಗಳು ದಾಖಲಾಗಿದ್ದು ಇದರಲ್ಲಿ 664 ದೌರ್ಜನ್ಯಕ್ಕೆ ಸಂಬಂಧಿಸಿದ್ದರೆ, 372 ಸಾಮಾಜಿಕ ಆರ್ಥಿಕ ವಿಷಯಕ್ಕೆ ಮತ್ತು 240 ಸೇವೆಗಳಿಗೆ ಸಂಬಂಧಿಸಿದ ದೂರು ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ‘ ದಿ ಪ್ರಿಂಟ್’ ವರದಿ ಮಾಡಿದೆ. 2020ರ ಜನವರಿ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಆಫ್‌ಲೈನ್ ಮೂಲಕ 19,264 ದೂರು ದಾಖಲಾಗಿದೆ ಎಂದು ಆಯೋಗ ಹೇಳಿದೆ. ಬೆಂಕಿ ಹಚ್ಚುವುದು, ಕೊಲೆ ಯತ್ನ, ಜಾತಿ ನಿಂದನೆ, ಮಾನಹಾನಿ, ಪೊಲೀಸರು ಕ್ರಮ ಕೈಗೊಳ್ಳದಿರುವುದು ಮುಂತಾದ ಕೃತ್ಯಗಳು ದೌರ್ಜನ್ಯದ ವ್ಯಾಖ್ಯಾನದ ವ್ಯಾಪ್ತಿಗೆ ಸೇರುತ್ತದೆ. ಜಾತಿ ಪ್ರಮಾಣ ಪತ್ರ ನೀಡಿಕೆಯಲ್ಲಿ ವಿಳಂಬ, ಜಾತಿ ಆಧಾರದಲ್ಲಿ ಭಡ್ತಿ ನೀಡುವಲ್ಲಿ ವಿಳಂಬ, ಸರಕಾರದ ಇಲಾಖೆಗಳಲ್ಲಿ ತಾರತಮ್ಯ ಮತ್ತು ಕಿರುಕುಳ ಪ್ರಕರಣಗಳು ‘ಸೇವೆ’ಗೆ ಸಂಬಂಧಿಸಿದ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆ.

ಸಾಮಾಜಿಕ ಆರ್ಥಿಕ ವಿಭಾಗದಡಿ ರಾಜ್ಯ, ಕೇಂದ್ರ, ಸಾರ್ವಜನಿಕ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಕಿರು ವಿವರಣೆಯೊಂದಿಗೆ ದಾಖಲಿಸಲಾಗುತ್ತದೆ. ಪೋರ್ಟಲ್‌ನಲ್ಲಿ ದೇಶದ ಯಾವುದೇ ಭಾಗದಿಂದ ದೂರು ದಾಖಲಿಸಬಹುದು. ದೂರು ದಾಖಲಾದ ಬಳಿಕ ಸಂಬಂಧಿಸಿದ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ ಇದಕ್ಕೆ 15ರಿಂದ 30 ದಿನದೊಳಗೆ ಉತ್ತರಿಸುವಂತೆ ಸೂಚಿಸಲಾಗುವುದು. ಅವರು ನಿಗದಿತ ಅವಧಿಯೊಳಗೆ ಉತ್ತರಿಸದಿದ್ದರೆ ಮತ್ತೆ 7 ದಿನದ ಅವಕಾಶ ನೀಡಲಾಗುವುದು. ಮತ್ತೂ ಉತ್ತರಿಸದಿದ್ದರೆ 3 ದಿನದ ಮತ್ತೊಂದು ಅವಕಾಶವಿದೆ. ಆ ಬಳಿಕ ವಿಚಾರಣೆ ಆರಂಭಿಸಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ವಿಜಯ್ ಸಂಪ್ಲಾ ಹೇಳಿದ್ದಾರೆ. ಜನರಿಗೆ ದೂರು ದಾಖಲಿಸಲು ಸುಲಭವಾಗುವ ನಿಟ್ಟಿನಲ್ಲಿ ಶೀಘ್ರದಲ್ಲೇ ಆ್ಯಪ್ ಒಂದನ್ನು ಆರಂಭಿಸಲಾಗುವುದು. ಗ್ರಾಮೀಣ ಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರದಲ್ಲೂ ಈ ಪೋರ್ಟಲ್‌ನ ಸೇವೆ ಲಭ್ಯವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News