ಉಡುಪಿ: ಕಟ್ಟಡ ಕಾರ್ಮಿಕರ ಆಹಾರ ಕಿಟ್ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಧರಣಿ

Update: 2021-07-06 13:42 GMT

ಉಡುಪಿ, ಜು.6: ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಲ್ಲಿ ಕಲ್ಯಾಣ ಮಂಡಳಿಯ ಸುಮಾರು 14 ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಛೇರಿ ಮುಂದೆ ಧರಣಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಖಾತೆಗೆ ಆಧಾರ್ ಲಿಂಕ್ ಜೋಡಣೆಯಾಗದ ಕಾರಣ ಕರೋನ ಪರಿಹಾರ 3000ರೂ. ಜಿಲ್ಲೆಯ ಸುಮಾರು 4155 ಮಂದಿಗೆ ಜಮೆಯಾಗಿಲ್ಲ ಎಂದು ಮಂಡಳಿ ತಿಳಿಸಿದೆ. ಈ ಹಿಂದಿನ ಅವಧಿಯ 5000ರೂ. ಕೂಡ ಮಂಡಳಿ ಜಮೆಯಾಗದವರಿಗೆ ನೀಡಿರಲಿಲ್ಲ. ಮಂಡಳಿ ಆಹಾರ ಕಿಟ್ಗೆ ನೀಡಲು ವಹಿಸುವ ಮುತುವರ್ಜಿ ಖಾತೆಗೆ ನಗದು ಜಮೆ ಮಾಡುವ ಬಗ್ಗೆಯೂ ಕೂಡಲೇ ತೀರ್ಮಾನಿಸಿ ಡಿಡಿ/ಚೆಕ್ ನೀಡಬೇಕು ಎಂದರು.

ಕಲ್ಯಾಣ ಮಂಡಳಿ ಹಣವನ್ನು ಇಂದು ರಾಜಕೀಯ ಪ್ರೇರಿತ ಉದ್ದೇಶಗಳಿಗೆ, ಸರಕಾರಿ ಯೋಜನೆಗಳಿಗೆ ದುರ್ಬಳಕೆ ಮಾಡಲಾಗುತ್ತಿದೆ. ಅದೇ ರೀತಿ ಪ್ರಭಾವಿ ವ್ಯಕ್ತಿಗಳು ಲೂಟಿ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ ಮಾತನಾಡಿ, ಸೇವಾ ಸಿಂಧುಗಳ ಮೂಲಕ ಕಟ್ಟಡ ಕಾರ್ಮಿಕರ ನೋಂದಾವಣೆ ಮಾಡುತ್ತಿರುವ ಸೈಬರ್ಗಳಲ್ಲಿ ಕಟ್ಟಡ ಕೆಲಸ ಮಾಡದವರನ್ನು ನೋಂದಾಯಿಸಿ ಕೋಟ್ಯಾಂತರ ಹಣ ಅನರ್ಹರು ಪಡೆಯುತ್ತಿದ್ದಾರೆ. ಈ ಬಗ್ಗೆ ಕಲ್ಯಾಣ ಮಂಡಳಿಗೆ ಹಲವಾರು ಬಾರಿ ದೂರು ನೀಡಲಾಗಿದ್ದರೂ ಇಂತವರ ಮೇಲೆ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಹಿರಿಯ ಕಾರ್ಮಿಕ ಮುಖಂಡ ಯು.ದಾಸ ಭಂಡಾರಿ, ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಸಂಚಾಲಕ ಶೇಖರ ಬಂಗೇರ, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ಚಿಕ್ಕ ಮೊಗವೀರ, ವೆಂಕಟೇಶ ಕೋಣಿ ಮಾತನಾಡಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೂಲಕ ಕಾರ್ಮಿಕ ಸಚಿವರು ಹಾಗು ಮಂಡಳಿಯ ಸಿಇಓಗೆ ಮನವಿ ಸಲ್ಲಿಸಲಾಯಿತು.

ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಸ್ವಾಗತಿಸಿದರು. ಕಟ್ಟಡ ಕಾರ್ಮಿಕರ ಮುಖಂಡರಾದ ದಯಾನಂದ ಕೋಟ್ಯಾನ್, ಜಗದೀಶ ಆಚಾರ್, ಗಣೇಶ ನಾಯ್ಕ, ಅಲೆಕ್ಸಾಂಡರ್, ಅರುಣ್ ಕುಮಾರ್, ಅನಂತ ಕುಲಾಲ್, ಸುಭಾಶ್ ನಾಯ್ಕ್, ರಾಮ ಕಾರ್ಕಡ, ಗಣೇಶ ತೊಂಡೆಮಕ್ಕಿ, ಅಮ್ಮಯ್ಯ ಪೂಜಾರಿ, ಮಂಜು ಪಡುವರಿ, ಸಿಐಟಿಯು ತಾಲೂಕು ಕಾರ್ಯದರ್ಶಿ ಕವಿರಾಜ್ ಎಸ್., ಶಶಿಧರ ಗೊಲ್ಲ, ಉೆುೀಶ್ ಕುಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News