ಲಸಿಕೆ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಸುಣ್ಣ, ಗುಜರಾತಿಗೆ ಬೆಣ್ಣೆ: ಡಿ.ಕೆ.ಶಿವಕುಮಾರ್

Update: 2021-07-06 13:55 GMT

ಉಡುಪಿ, ಜು.6: ಲಸಿಕೆ ಹಂಚಿಕೆ ಕುರಿತು ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಆದ್ಯತೆ ನೀಡುತ್ತಿಲ್ಲ. ಕರ್ನಾಟಕದ ಬಗ್ಗೆ ಅಸಡ್ಡೆ ತೋರುತ್ತಿದೆ. ಗುಜರಾತ್ ಮತ್ತು ಕರ್ನಾಟಕಕ್ಕೆ ಎಷ್ಟು ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ತುಲನೆಯಾಗಲಿ. ಗುಜರಾತಿಗೆ ಅತಿ ಹೆಚ್ಚು ಲಸಿಕೆ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಲಸಿಕೆ ನೀಡದ ಪರಿಣಾಮ ಜನ ಪರದಾಡುತ್ತಿದ್ದಾರೆ. ಈ ಮೂಲಕ ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಸುಣ್ಣ, ಗುಜರಾತ್ ರಾಜ್ಯಕ್ಕೆ ಬೆಣ್ಣೆ ಎಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಲಸಿಕೆಯ ಸಂಖ್ಯೆಯಲ್ಲಿ ಬೋಗಸ್ ಆಗುತ್ತಿದೆ. ರಾಜ್ಯಕ್ಕೆ ನೀಡುವ ಲಸಿಕೆ ಸಾಲದು. ಲಸಿಕೆ ಖರೀದಿಸುವಂತೆ ಕೇವಲ ಖಾಸಗಿಯವರಿಗೆ ಉತ್ತೇಜನ ಮಾಡಲಾಗುತ್ತಿದೆ. ಉಚಿತ ಲಸಿಕೆ ನೀಡಲು ತಾರತಮ್ಯ ಎಸಗುತ್ತಿ ದ್ದಾರೆ ಎಂದು ದೂರಿದರು.

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅವಕಾಶಗಳು ಸಿಗಲಿ. ಹೊಸದಾಗಿ ಆಯ್ಕೆಯಾಗುವವರು ರಾಜ್ಯದ ಧ್ವನಿಯಾಗಿ ಕೆಲಸ ಮಾಡಲಿ. ನಮ್ಮ 25 ಸಂಸದರು ಬಾಯಿ ಮುಚ್ಚಿಕೊಂಡಿದ್ದಾರೆ. ಸಂಸದರು ನಮ್ಮ ರಾಜ್ಯದ ಬಗ್ಗೆ ಬಾಯಿ ಬಿಚ್ಚುವುದಿಲ್ಲ. ಜೆಎಸ್‌ಟಿ, ಲಸಿಕೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಟೀಕಿಸಿದರು.

"ಮೋದಿ ವಿರುದ್ಧ ಮಾತನಾಡಿದರೆ ತೊಂದರೆ"
ಮೋದಿ ಬಗ್ಗೆ ಮಾತನಾಡಿದರೆ ಒಳ್ಳೆಯದಾಗಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮೋದಿ ಕುರಿತು ಮಾತನಾಡಿದರೆ ನನಗೆ ತೊಂದರೆ ಆಗುತ್ತದೆ ಎಂಬುದು ಗೊತ್ತಿದೆ. ತೊಂದರೆಯಾದರೂ ಚಿಂತೆ ಇಲ್ಲ. ನಾವು ಹೋರಾಟ ಮಾಡೇ ಮಾಡುತ್ತೇವೆ. ಜನರ ಧ್ವನಿಯಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ರೇಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾವತ್ತೂ ಯಾರಿಗೂ ನನ್ನನ್ನು ಅಭ್ಯರ್ಥಿ ಮಾಡಿ ಎಂದು ಹೇಳಿಲ್ಲ. ಈಗ ಅದನ್ನು ಚರ್ಚೆ ಮಾಡುವ ಅಗತ್ಯ ಇಲ್ಲ. ಜನರ ಸಮಸ್ಯೆ ಆಲಿಸಿ ನ್ಯಾಯ ಕೊಡಿಸಬೇಕಾಗಿದೆ. ಇಂದಿನ ಕೊರೋನ ಕಾಲದಲ್ಲಿ ಜೀವ ಇದ್ದರೆ ಜೀವನ ಎಂಬಾತಾಗಿದೆ ಎಂದರು.

ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ವಿಚಾರದ ಪ್ರಶ್ನೆಗೆ, ಈಗ ಅದನ್ನೆಲ್ಲ ಚರ್ಚೆ ಮಾಡುವ ಅಗತ್ಯ ಇಲ್ಲ. ಇದೆಲ್ಲ ಪಕ್ಷದ ಒಳಗೆ ತಿರ್ಮಾನಿಸುವ ವಿಚಾರವಾಗಿದೆ. ಈಗ ನಾನು ಈ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಡಿಸಿಎಂ ಸವದಿ ಪುತ್ರನ ಕಾರು ಅಪಘಾತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಷ್ಟೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಬೇಕು. ನಾನು ಪ್ರವಾಸದಲ್ಲಿರುವುದರಿಂದ ಎಲ್ಲ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಪಿ.ವಿ.ಮೋಹನ್, ನಿವೇದಿತಾ ಆಳ್ವ, ಭಾಸ್ಕರ್ ರಾವ್ ಕಿದಿಯೂರು, ವರೆನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.

ಖಾಲಿ ಪಾತ್ರೆ ಹೆಚ್ಚು ಶಬ್ದ ಮಾಡುತ್ತೆ!
ಮುರುಗೇಶ್ ನಿರಾಣಿ ಮುಂದಿನ ಸಿಎಂ ಎಂದು ಹೇಳಲಾಗುತ್ತಿದೆ. ಯತ್ನಾಳ್ ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಯಾರನ್ನು ಬೇಕಾದರೂ ಸಿಎಂ ಮಾಡಲಿ. ಇದನ್ನು ಪ್ರಶ್ನಿಸುವುದು ಕಾಂಗ್ರೆಸ್ ಕೆಲಸ ಅಲ್ಲ. ಕಾಂಗ್ರೆಸ್ ಬಳಿ ಸರಕಾರ ಮಾಡಲು ನಂಬರ್ ಇಲ್ಲ. ಈ ವಿಚಾರದಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ. ಯಡಿಯೂರಪ್ಪನವರ ಬಗ್ಗೆ ನಾವು ಯಾಕೆ ಖಾಲಿ ಮಾತನಾಡಬೇಕು. ಅವರ ಪಕ್ಷದಲ್ಲಿ ಏನೇನೋ ಜೋರಾಗಿ ಶಬ್ದ ಮಾಡುತ್ತಿರುತ್ತವೆ. ಖಾಲಿ ಪಾತ್ರೆಗಳು ಬಹಳ ಶಬ್ದ ಮಾಡುತ್ತವೆ ಎಂದು ಹೇಳಿದರು.

'ಮೀನುಗಾರರ ಬಗ್ಗೆ ಸರಕಾರಕ್ಕೆ ಚಿಂತನೆ ಇಲ್ಲ'
ಸರಕಾರಕ್ಕೆ ಮೀನುಗಾರರ ಬಗ್ಗೆ ಯಾವುದೇ ಚಿಂತನೆ ಇಲ್ಲ. ಮೂರು ಲಕ್ಷ ಮೀನುಗಾರರ ಪೈಕಿ ಕೇವಲ 18ಸಾವಿರ ಮಂದಿಗೆ ಮಾತ್ರ 3ಸಾವಿರ ರೂ. ಪರಿಹಾರ ನೀಡಿದ್ದಾರೆ. ಅದು ಯಾರಿಗೆ ತಲುಪಿದೆಯೋ ತಲುಪಿಲ್ಲವೋ ಗೊತ್ತಿಲ್ಲ. ಎಲ್ಲ ಮೀನುಗಾರರಿಗೂ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಿಕೊಡುವ ಅಗತ್ಯ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸರಕಾರದಿಂದ ಮೀನುಗಾರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅದನ್ನು ಅವರು ಹೇಳಿಕೊಂಡಿದ್ದಾರೆ. ಮುಂದೆ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿ, ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದ ಅವರು, ಮೀನುಗಾರರ ಬೇಡಿಕೆ ಈಡೇರಿಸುವಂತೆ ಹೋರಾಟ ಮಾಡಲಾಗುವುದು. ಸರಕಾರ ಮಾಡದಿದ್ದರೆ ಮುಂದೆ ಪಕ್ಷದ ಚುನುವಾಣಾ ಪ್ರಣಾಳಿಕೆಯಲ್ಲಿ ಇವರ ಬೇಡಿಕೆಗಳನ್ನು ಆಶ್ವಾಸನೆಯಾಗಿ ಸೇರಿಸಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗ ಕೊಟ್ಟ ಮಾತನ್ನು ಮುಂದೆ ಉಳಿಸಿ ಕೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News