ಕೋವಿಡ್ ನಿಂದಾಗಿ 12.40 ಕೋಟಿ ಜನರು ಬಡತನದ ದವಡೆಗೆ: 25.50 ಕೋಟಿ ಜನರ ಉದ್ಯೋಗ ನಷ್ಟ; ವರದಿ

Update: 2021-07-06 17:45 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್,ಜು.6: ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ 2020ರಲ್ಲಿ ಸುಮಾರು 12.40 ಕೋಟಿ ಜನರು ಬಡತನಕ್ಕೆ ಜಾರಿದ್ದಾರೆ ಹಾಗೂ 25.50 ಕೋಟಿ ಜನರು ಪೂರ್ಣಾವಧಿಯ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆಂದು ವಿಶ್ವಸಂಸ್ಥೆಯು ಮಂಗಳವಾರ ಪ್ರಕಟಿಸಿದ ವರದಿಯೊಂದು ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ ಕೋವಿಡ್19 ಹಾವಳಿಗೂ ಮೊದಲೇ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣದಲ್ಲಿ ಏರಿಕೆಯಾಗತೊಡಗಿದ್ದು, ಸೋಂಕಿನ ಬಳಿಕ 8.30 ಕೋಟಿಯಿಂದ 13.20 ಕೋಟಿಯಷ್ಟು ಹೆಚ್ಚಾಗಿದೆಯೆಂದು ಅದು ಅಂದಾಜಿಸಿದೆ.
     
ಕೋವಿಡ್-19 ಪಿಡುಗು ಅಪ್ಪಳಿಸುವ ಮುನ್ನವೇ ಹಲವಾರು ದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಯ ಪ್ರಗತಿ ಕುಂಠಿತವಾಗಿತ್ತು. ಆದರೆ ಸೋಂಕಿನ ಹಾವಳಿಯ ನಂತರವಂತೂ ಪರಿಸ್ಥಿತಿ ಅತ್ಯಂತ ಶೋಚನೀಯಗೊಂಡಿತು ಎಂದು ವಿಶ್ವಸಂಸ್ಥೆ ಹೇಳಿದೆ. ಕೋವಿಡ್ನಿಂದ ಹದಗೆಟ್ಟ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ರೂಪಿಸಲಾದ ರೂಪಿಸಲಾದ ಯೋಜನೆಗಳು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ತಲುಪಲು ಸಫಲವಾಗಲಿವೆಯೇ ಎಂಬುದನ್ನು ನಿರ್ಧರಿಸಲು ಮುಂದಿನ 18 ತಿಂಗಳುಗಳು ನಿರ್ಣಾಯಕವಾಗಿವೆೆ ಎಂದು ವರದಿ ಹೇಳಿದೆ.
  
ಕೊರೋನ ಹಾವಳಿಯ ಪರಿಣಾಮವಾಗಿ ಜಗತ್ತಿನ ಸಬ್-ಸಹರಾ ಆಫ್ರಿಕ ಪ್ರಾಂತದಲ್ಲಿ 1 ಕೋಟಿಗೂ ಅಧಿಕ ಬಾಲಕಿಯರು ಬಾಲ್ಯ ವಿವಾಹದ ಅಪಾಯವನ್ನು ಎದುರಿಸುತ್ತಿದ್ದಾರೆಂದು ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಪತನವು ಅಭಿವೃದ್ಧಿ ಹೊಂದುತ್ತಿರುವ ಪುಟ್ಟ ದ್ವೀಪ ರಾಷ್ಟ್ರಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಬೀರಿದೆಯೆಂದು ವರದಿ ಹೇಳಿದೆ.

2019ಕ್ಕೆ ಹೋಲಿಸಿದರೆ 2020ರಲ್ಲಿ ವಿದೇಶಿ ನೇರ ಹೂಡಿಕೆಯು ಶೇ.40ಕ್ಕೆ ಕುಸಿದಿದೆ. ಕೋವಿಡ್ ಪಿಡುಗು ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಗಾಧವಾದ ಆರ್ಥಿಕ ಸವಾಲುಗಳನ್ನು ಒಡ್ಡಿದೆಯೆಂದು ವರದಿಯು ತಿಳಿಸಿದೆ.

ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಮರಳಿ ಹಳಿಗೆ ತರಬೇಕಾದರ ಸರಕಾರಗಳು, ನಗರಾಡಳಿತಗಳು, ಔದ್ಯಮಿಕ ಹಾಗೂ ಕೈಗಾರಿಕೆಗಳು, ಕಡಿಮೆ ಇಂಗಾಲದ ಹೊರಸೂಸುವಿಕೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ, ಉತ್ತಮ ಉದ್ಯೋಗಗಳ ಸೃಷ್ಟಿ, ಲಿಂಗ ಸಮಾನತೆಗೆ ಉತ್ತೇಜನ ಹಾಗೂ ಅಸಮಾನತೆಯ ಹೆಚ್ಚಳವನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ವರದಿ ಹೇಳಿದೆ.

ನಾವೀಗ ಮಾನವ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಈಗ ನಾವು ಕೈಗೊಳ್ಳುವ ನಿರ್ಧಾರಗಳು ಹಾಗೂ ಕ್ರಮಗಳು ಮುಂದಿನ ತಲೆಮಾರುಗಳ ಮೇಲೆ ಮಹತ್ವದ ಪರಿಣಾಮನ್ನು ಬೀರಲಿವೆ. ಕೊರೋನ ಸಾಂಕ್ರಾಮಿಕದ ಪಿಡುಗಿನಿಂದ ನಾವು ಕಲಿತ ಪಾಠವು ನಮಗೆ ವರ್ತಮಾನದ ಹಾಗೂ ಭವಿಷ್ಯದ ಸವಾಲುಗಳಿಂದ ಮೇಲೇಳು ನೆರವಾಗಲಿದೆ.

ಲಿಯು ಝೆನ್ಮಿನ್
ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ
ವ್ಯವಹಾರಗಳ ಅಧೀನ ಕಾರ್ಯದರ್ಶಿ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News