ಮೀಸಲು ಅರಣ್ಯದಲ್ಲಿ ಪ್ರಾಣಿ ಬೇಟೆಗೆ ಯತ್ನ ಆರೋಪ : ನಾಲ್ವರ ಬಂಧನ

Update: 2021-07-08 13:52 GMT

ಶಂಕರನಾರಾಯಣ, ಜು.8: ಮೀಸಲು ಅರಣ್ಯದಲ್ಲಿ ವನ್ಯಪ್ರಾಣಿಗಳ ಬೇಟೆಗೆ ಕೋವಿಯೊಂದಿಗೆ ಕಾರಿನಲ್ಲಿ ಪ್ರಯಣಿಸುತ್ತಿದ್ದ ನಾಲ್ವರನ್ನು ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ.

ಬ್ರಹ್ಮಾವರ ನಾಲ್ಕೂರು ಮರಾಳಿಯ ರಾಜೇಶ್(30), ಕೊಕ್ಕರ್ಣೆಯ ಚೇತನ್ ಪೂಜಾರಿ(24), ಕಕ್ಕುಂಜೆಯ ಪ್ರಮೋದ್ ಕುಲಾಲ್(27), ಮುಂಬೈ ಗೋರೆ ಗಾಂವ್‌ನ ರವೀಂದ್ರ ಕೆ.ಸುವರ್ಣ(46) ಬಂಧಿತ ಆರೋಪಿಗಳು. ಇವರಿಂದ ಕಾರು, ಮೂರು ಟಾರ್ಚ್, ಆರು ಮೊಬೈಲ್‌ಗಳು, ಗುಂಡು ಸಹಿತ ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಿಲ್ಲಾಡಿ ಬ್ಲಾಕ್ ಮೀಸಲು ಅರಣ್ಯದ ಮಧ್ಯದಲ್ಲಿ ಹಾದು ಹೋಗಿರುವ ಶಿರಿಯಾರ- ಮೆಟ್ಕಲಾಣೆ ರಸ್ತೆಯಲ್ಲಿ ಅರಣ್ಯಾಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಬೇಟೆಗೆ ಬಳಸುವ ಸಾಧನಗಳಿರುವುದು ಗಮನಿಸಿದರು. ಅದರಂತೆ ಆರೋಪಿಗಳನ್ನು ವಶಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಯಿತು.

ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಲೋಹಿತ್ ಮಾರ್ಗದರ್ಶನದಂತೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜಿ., ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್ ಜಿ.ನಾಯ್ಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ರವೀಂದ್ರ, ರವಿ, ಅರಣ್ಯ ವೀಕ್ಷಕ ಲಕ್ಷ್ಮಣ, ಸಿಬ್ಬಂದಿ ಸದಾಶಿವ, ವಾಹನ ಚಾಲಕ ಯೋಗೀಂದ್ರ ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News