ಈಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ ರದ್ದು ವಿರೋಧಿಸಿ ಮೇಲ್ಮನವಿ ಸಲ್ಲಿಸಲು ಕೇರಳ ಸರಕಾರ ನಿರ್ಧಾರ

Update: 2021-07-08 18:14 GMT

ತಿರುವನಂತಪುರಂ, ಜು.8: ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳ ವಿರುದ್ಧದ ಎಫ್ಐಆರ್ ರದ್ದುಗೊಳಿಸಿರುವ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕೇರಳ ಸರಕಾರ ಹೇಳಿದೆ. ಕಳೆದ ವರ್ಷ ರಾಜತಾಂತ್ರಿಕರ ಬ್ಯಾಗ್ ನಿಂದ 15 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡ ಪ್ರಕರಣ ಇದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ತಿರುವನಂತಪುರಂನಲ್ಲಿರುವ ಅರಬ್ ಎಮಿರೇಟ್ಸ್ನ ಕಾನ್ಸುಲರ್ ಜನರಲ್ ಕಚೇರಿಯ ಉದ್ಯೋಗಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ವಿರುದ್ಧ ಅಕ್ಟೋಬರ್ ನಲ್ಲಿ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿತ್ತು.

ಇವರ ವಿಚಾರಣೆ ಬಳಿಕ ಕೇರಳ ಪೊಲೀಸರು ಮಾರ್ಚ್ ನಲ್ಲಿ ಜಾರಿ ನಿರ್ದೇಶನಾಲಯದ ಗುರುತಿಸಲಾಗದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಪೊಲೀಸರು ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಿತ್ತು ಎಂದು ಹೇಳಿದ್ದ ಕೇರಳ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ಎಪ್ರಿಲ್ 16ರಂದು ಈ ಎಫ್ಐಆರ್ ಅನ್ನು ರದ್ದುಗೊಳಿಸಿತ್ತು.

ಅಧಿಕಾರಿಗಳ ವಿರುದ್ಧದ ಆರೋಪ ಗಮನಾರ್ಹವಲ್ಲ ಎಂದು ಕಾರಣ ನೀಡಿ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿರುವ ಆದೇಶ ಸರಿಯಲ್ಲ. ಪೊಲೀಸ್ ಕ್ರೈಂಬ್ರಾಂಚ್ ವಿಭಾಗ ಈ ಆರೋಪವನ್ನು ಪರಿಶೀಲಿಸಲು ಮತ್ತು ಸಾಬೀತುಪಡಿಸಲು ಸೂಕ್ತವಾಗಿದೆ ಎಂಬುದನ್ನು ಗೌರವಾನ್ವಿತ ನ್ಯಾಯಾಧೀಶರು ಗಮನಿಸಿಲ್ಲ ಎಂದು ಹೇಳಿರುವ ಕೇರಳ ಸರಕಾರ, ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News