ಬಾಂಗ್ಲಾದೇಶದ ಕಾರ್ಖಾನೆಯಲ್ಲಿ ಬೆಂಕಿ ದುರಂತ: ಮೃತರ ಸಂಖ್ಯೆ 52ಕ್ಕೇರಿಕೆ
ರೂಪ್ಗಂಜ್ (ಬಾಂಗ್ಲಾದೇಶ), ಜು. 9: ಬಾಂಗ್ಲಾದೇಶದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 52 ಮಂದಿ ಮೃತಪಟ್ಟಿದ್ದಾರೆ. ಬೆಂಕಿಯ ಜ್ವಾಲೆಯಿಂದಾಗಿ ಮಹಡಿಗಳಲ್ಲಿ ಸಿಕ್ಕಿಹಾಕಿಕೊಂಡ ಕೆಲಸಗಾರರು ಜೀವ ಉಳಿಸಿಕೊಳ್ಳುವುದಕ್ಕಾಗಿ ಕೆಳಗೆ ಹಾರಿ ಪ್ರಾಣ ಕಳೆದುಕೊಂಡರು ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
ರಾಜಧಾನಿ ಢಾಕಾದ ಹೊರವಲಯದಲ್ಲಿರುವ ರೂಪ್ಗಂಜ್ ಕೈಗಾರಿಕಾ ವಸಾಹತಿನಲ್ಲಿರುವ ಹಾಶಿಮ್ ಆಹಾರ ಮತ್ತು ಪಾನೀಯ ಕಾರ್ಖಾನೆಯಲ್ಲಿ ಗುರುವಾರ ಅಪರಾಹ್ನ ಬೆಂಕಿ ಸಂಭವಿಸಿತು. ಹೊತ್ತಿಕೊಂಡು 24 ಗಂಟೆ ಕಳೆದರೂ ಬೆಂಕಿ ಇನ್ನೂ ಉರಿಯುತ್ತಿದೆ.
ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಒಳಗೆ ಸಿಕ್ಕಿಹಾಕಿಕೊಂಡಿದ್ದ ಕೆಲಸಗಾರರ ನೂರಾರು ಸಂಬಂಧಿಕರು ಮತ್ತು ಇತರ ಕೆಲಸಗಾರರು ಕಾರ್ಖಾನೆಯ ಹೊರಗೆ ಜಮಾಯಿಸಿದ್ದರು.
ಬೆಂಕಿಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದಾಗಿ ಪೊಲೀಸರು ಆರಂಭದಲ್ಲಿ ಹೇಳಿದ್ದರು. ಆದರೆ, ಅಗ್ನಿಶಾಮಕ ಸಿಬ್ಬಂದಿ ಮೇಲಿನ ಮಹಡಿಗಳನ್ನು ತಲುಪಿ ಕೆಲಸಗಾರರ ಹತ್ತಾರು ದೇಹಗಳನ್ನು ಹೊರತರುತ್ತಿರುವಂತೆಯೇ ಮೃತರ ಸಂಖ್ಯೆ ಗಣನೀಯವಾಗಿ ಏರಿತು.
ಅದೇ ವೇಳೆ, ನೂರಾರು ಜನರು ಜಮಾಯಿಸಿದಾಗ ಸುತ್ತಲಿನ ರಸ್ತೆಗಳೆಲ್ಲ ಮುಚ್ಚಿ ಹೋಯಿತು. ಜನರನ್ನು ಚದುರಿಸಲು ಪೊಲೀಸರು ಬಲಪ್ರಯೋಗಿಸಬೇಕಾಯಿತು.