×
Ad

ನ್ಯಾಶನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಕಿರೀಟ ಧರಿಸಿದ ಮೊದಲ ಆಫ್ರಿಕಾ ಸಂಜಾತೆ ಝೈಲಾ ಅವಂತ್-ಗಾರ್ಡ್

Update: 2021-07-09 15:32 IST

ವಾಶಿಂಗ್ಟನ್, ಜು.9: ಪ್ರತಿಷ್ಠಿತ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಪ್ರಶಸ್ತಿ ಗೆದ್ದುಕೊಂಡಿರುವ 14 ವರ್ಷದ ಝೈಲಾ ಆವಂತ್-ಗಾರ್ಡೆ, ಈ ಹಿರಿಮೆಗೆ ಪಾತ್ರವಾದ ಪ್ರಪ್ರಥಮ ಆಫ್ರಿಕ ಮೂಲದ ಅಮೆರಿಕನ್ ಎಂಬ ದಾಖಲೆ ಬರೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಸ್ಪರ್ಧೆಯಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಭಾರತೀಯ ಮೂಲದ ಅಮೆರಿಕನ್ನರು ಈ ಬಾರಿ 2 ಮತ್ತು 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 

ಸ್ಯಾನ್ ಫ್ರಾನ್ಸಿಸ್ಕೊ ನಿವಾಸಿ, 12 ವರ್ಷದ ಚೈತ್ರಾ ಥುಮ್ಮಲ 2ನೇ, ನ್ಯೂಯಾರ್ಕ್ ನ 13 ವರ್ಷದ ಭಾವನಾ ಮದಿನಿ 3ನೇ ಸ್ಥಾನ ಪಡೆದಿದ್ದಾರೆ. ಫ್ಲೋರಿಡಾದ ಒರ್ಲಾಂಡೊದಲ್ಲಿರುವ ಇಎಸ್ಪಿಎನ್ ವರ್ಲ್ಡ್ ಆಫ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ 11 ಮಂದಿಯ ಮಧ್ಯೆ ನಿಕಟ ಸ್ಪರ್ಧೆ ನಡೆದಿತ್ತು. ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಫೈನಲ್ ಸ್ಪರ್ಧೆಯ ವೀಕ್ಷಕರಲ್ಲಿ ಒಬ್ಬರಾಗಿದ್ದರು. ಗರಿಯಂತಹ ಎಲೆಗಳು ಹಾಗೂ ಹೂ ಹೊಂದಿರುವ, ಏಶ್ಯಾ ಹಾಗೂ ಆಸ್ಟ್ರೇಲಿಯದ ಉಷ್ಣವಲಯದಲ್ಲಿ ಕಂಡುಬರುವ ‘ಮುರಯ್ಯ’ ಎಂಬ ವಿಶಿಷ್ಟ ತಳಿಯ ಮರದ ಹೆಸರಿನ ಸ್ಪೆಲ್ಲಿಂಗ್ ಅನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಉಚ್ಛರಿಸಿದ ಝೈಲಾ ಕಿರೀಟದ ಜೊತೆಗೆ 50,000 ಡಾಲರ್ ಮೊತ್ತದ ಪುರಸ್ಕಾರಕ್ಕೆ ಪಾತ್ರರಾದರು. 

93 ವರ್ಷದ ಇತಿಹಾಸವಿರುವ ಈ ಸ್ಪರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಝೈಲಾ, ಈ ಸ್ಪರ್ಧೆ ಗೆದ್ದಿರುವ ಲೂಸಿಯಾನಾದ ಪ್ರಥಮ ನಿವಾಸಿ ಹಾಗೂ ಆಫ್ರಿಕ ಮೂಲದ ಪ್ರಥಮ ಪ್ರಜೆಯಾಗಿದ್ದಾರೆ. 2019ರಲ್ಲಿ 370ನೇ ಸ್ಥಾನದಲ್ಲಿದ್ದ ಝೈಲಾ 2021ರಲ್ಲಿ ಅಗ್ರಸ್ಥಾನದಲ್ಲಿರುವುದು ನಮಗೆಲ್ಲಾ ಹೆಮ್ಮೆಯ ಮತ್ತು ಖುಷಿಯ ವಿಷಯವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಸ್ಪರ್ಧೆಯ ಆಯೋಜಕರು ಟ್ವೀಟ್ ಮಾಡಿದ್ದಾರೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷದ ಆವೃತ್ತಿಯ ಸ್ಪರ್ಧೆ ರದ್ದಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News