ಬಂಗಾಳದಲ್ಲಿ ಮಮತಾ ಸರಕಾರ ಎಡಪಕ್ಷಗಳಿಗಿಂತ ಉತ್ತಮ ಆಡಳಿತ ನಡೆಸುತ್ತಿದೆ ಎಂದ ಬಿಜೆಪಿ ಶಾಸಕ !
ಕೊಲ್ಕತ್ತಾ: ಬಿಜೆಪಿಗೆ ಭಾರೀ ಇರಿಸುಮುರಿಸು ಉಂಟುಮಾಡುವ ಬೆಳವಣಿಗೆಯೊಂದರಲ್ಲಿ, ಪಕ್ಷದ ಶಾಸಕ ಹಾಗೂ ಅರ್ಥಶಾಸ್ತ್ರಜ್ಞ ಅಶೋಕ್ ಲಹಿರಿ ಅವರು ಬುಧವಾರ ರಾಜ್ಯದ ಮಮತಾ ಬ್ಯಾನರ್ಜಿ ಸರಕಾರವನ್ನು ಹೊಗಳಿದ್ದಾರೆ. ರಾಜ್ಯದಲ್ಲಿ ಎಡ ರಂಗ ಆಡಳಿತದ 34 ವರ್ಷಗಳ ಅವಧಿಗೆ ಹೋಲಿಸಿದಾಗ ಈಗಿನ ಟಿಎಂಸಿ ಸರಕಾರ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ವಿತ್ತ ಸಚಿವ ಆಶಿಮ್ ದಾಸಗುಪ್ತಾ ಅವರಿಗೆ ಹೋಲಿಸಿದಾಗ ಈಗಿನ ವಿತ್ತ ಸಚಿವ ಅಮಿತ್ ಮಿತ್ರ ಅವರ ಕಾರ್ಯನಿರ್ವಹಣೆಯ ಕುರಿತು ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಹಿರಿ, "ಇದೊಂದು ಉತ್ತರಿಸಲು ಕಷ್ಟವಾದ ಪ್ರಶ್ನೆ. ಇಬ್ಬರೂ ನನಗೆ ಚೆನ್ನಾಗಿ ಗೊತ್ತು. ಆದರೆ ಈಗಿನ ಟಿಎಂಸಿ ಆಡಳಿತದಡಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಪಶ್ಚಿಮ ಬಂಗಾಳವು ಉತ್ತಮ ಸಾಧನೆ ಮಾಡಿದೆ ಎಂದು ನಾನು ನಂಬಿದ್ದೇನೆ,'' ಎಂದು ಲಹಿರಿ ಹೇಳಿದರು.
"ರಾಜ್ಯ ಸರಕಾರದ ಲೆಕ್ಕಪತ್ರಗಳನ್ನು ಸಿಎಜಿ ಕೂಲಂಕಷವಾಗಿ ಪರಿಶೀಲಿಸಬೇಕು, ಸಾಲದ ಪ್ರಮಾಣ ಕೂಡ ಕಡಿಮೆಯಾಗಬೇಕು. ರಾಜ್ಯದಲ್ಲಿ ಜಾರಿಯಲ್ಲಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ವಿವರಗಳನ್ನೂ ರಾಜ್ಯ ಸರಕಾರ ಬಹಿರಂಗಪಡಿಸಬೇಕು'' ಎಂದು ಬಜೆಟ್ ಪ್ರಸ್ತಾವನೆಗಳ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ವೇಳೆ ಲಹಿರಿ ಈ ಹಿಂದೆ ಹೇಳಿದ್ದರು.