×
Ad

ರಾಷ್ಟ್ರಗೀತೆ ಹಾಡುವಾಗ ನಿಲ್ಲದೇ ಇರುವುದು, ಹಾಡದಿರುವುದು ಅಪರಾಧವಾಗುವುದಿಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

Update: 2021-07-10 13:41 IST

 ಶ್ರೀನಗರ,ಜು.10: ರಾಷ್ಟ್ರಗೀತೆಗಾಗಿ ಎದ್ದು ನಿಲ್ಲದಿರುವುದು ಅಥವಾ ರಾಷ್ಟ್ರಗೀತೆಯನ್ನು ಹಾಡದಿರುವುದು ಅಗೌರವ ಮತ್ತು ಮೂಲಭೂತ ಕರ್ತವ್ಯಗಳ ಪಾಲನೆಯಲ್ಲಿ ವೈಫಲ್ಯವಾಗಬಹುದಾದರೂ ಅದು ಅಪರಾಧವಲ್ಲ ಎಂದು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ಭಾರತೀಯ ರಾಷ್ಟ್ರಗೀತೆಗೆ ಅಗೌರವವು ಅಪರಾಧವಲ್ಲ. ವ್ಯಕ್ತಿಯ ನಡವಳಿಕೆಯು ರಾಷ್ಟ್ರಗೀತೆಯನ್ನು ಹಾಡಲು ಅಡ್ಡಿಯನ್ನುಂಟು ಮಾಡಿದರೆ ಅಥವಾ ರಾಷ್ಟ್ರಗೀತೆ ಗಾಯನದಲ್ಲಿ ತೊಡಗಿರುವ ಯಾವುದೇ ಸಮಾವೇಶಕ್ಕೆ ವ್ಯತ್ಯಯವನ್ನುಂಟು ಮಾಡಿದರೆ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ 1971ರ ಕಲಂ 3ರಡಿ ದಂಡನೆಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ರಾಷ್ಟ್ರಗೀತೆಯನ್ನು ಹಾಡುವ ಸಂದರ್ಭದಲ್ಲಿ ಎದ್ದು ನಿಲ್ಲದಿರುವುದು,ಎದ್ದು ನಿಂತಿದ್ದರೂ ಗುಂಪಿನ ಇತರ ಸದಸ್ಯರೊಂದಿಗೆ ರಾಷ್ಟ್ರಗೀತೆಯನ್ನು ಹಾಡದಿರುವುದು ರಾಷ್ಟ್ರಗೀತೆಗೆ ಅಗೌರವ ಮತ್ತು ಸಂವಿಧಾನದ ಭಾಗ 4ಎದಲ್ಲಿ ಹೇಳಲಾಗಿರುವ ಮೂಲಭೂತ ಕರ್ತವ್ಯಗಳ ಪಾಲನೆಯಲ್ಲಿ ವೈಫಲ್ಯವಾಗಬಹುದಾದರೂ ಕಾಯ್ದೆಯ ಕಲಂ 3ರಡಿ ವ್ಯಾಖ್ಯಾನಿಸಿರುವಂತೆ ಅಪರಾಧವಾಗುವುದಿಲ್ಲ ಎಂದು ನ್ಯಾ.ಸಂಜೀವ ಕುಮಾರ ಅವರು ಡಾ.ತೌಸೀಫ್ ಅಹ್ಮದ್ ಭಟ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದ ತೀರ್ಪಿನಲ್ಲಿ ಹೇಳಿದ್ದಾರೆ.
ಕಾಯ್ದೆಯ ಕಲಂ 3ರಡಿ ಬಾನಿ ಪೊಲೀಸರು ತನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಭಟ್ ಪ್ರಶ್ನಿಸಿದ್ದರು.

ಬಾನಿ ಸರಕಾರಿ ಪದವಿ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕರಾಗಿದ್ದಾಗ ಪಾಕಿಸ್ತಾನ ವಿರುದ್ಧದ ಭಾರತದ ಸರ್ಜಿಕಲ್ ದಾಳಿಯ ಯಶಸ್ಸನ್ನು ಆಚರಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯನ್ನು ಅವಮಾನಿಸಿದ್ದ ಆರೋಪದಲ್ಲಿ ಪೊಲೀಸರು ಸೆಪ್ಟೆಂಬರ್ 2018ರಲ್ಲಿ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಕೆಲವು ಕಾಲೇಜು ವಿದ್ಯಾರ್ಥಿಗಳಿಂದ ಲಿಖಿತ ದೂರನ್ನು ಸ್ವೀಕರಿಸಿದ್ದ ಬಾನಿ ಉಪ ವಿಭಾಗಾಧಿಕಾರಿಗಳ ನಿರ್ದೇಶದ ಮೇರೆಗೆ ಪೊಲೀಸರು ಭಟ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಎಫ್ಐಆರ್ ದಾಖಲಾದ ಬಳಿಕ ತಾನು ಉದ್ಯೋಗವನ್ನು ಕಳೆದುಕೊಂಡಿದ್ದೇನೆ ಎಂದು ಭಟ್ ಅರ್ಜಿಯಲ್ಲಿ ತಿಳಿಸಿದ್ದರು.

ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಲು ಮೊದಲ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆಯೇ ಹೊರತು ಮೊದಲ ದರ್ಜೆಯ ಕಾರ್ಯಕಾರಿ ದಂಡಾಧಿಕಾರಿ (ಉಪ ವಿಭಾಗಾಧಿಕಾರಿ)ಗಳಿಗೆ ಈ ಅಧಿಕಾರವಿಲ್ಲ ಎಂದು ಭಟ್ ಅರ್ಜಿಯಲ್ಲಿ ವಾದಿಸಿದ್ದರು.
 
ತಾನು ರಾಷ್ಟ್ರಗೀತೆಯ ಗಾಯನಕ್ಕೆ ತಡೆಯನ್ನುಂಟು ಮಾಡಿದ್ದೆ ಅಥವಾ ಸಮಾವೇಶವು ರಾಷ್ಟ್ರಗೀತೆಯನ್ನು ಹಾಡುವಾಗ ವ್ಯತ್ಯಯವನ್ನುಂಟು ಮಾಡಿದ್ದೆ ಎಂಬ ಯಾವುದೇ ಆರೋಪಗಳಿಲ್ಲ,ಹೀಗಾಗಿ ತಾನು ಕಾಯ್ದೆಯ ಕಲಂ 3ರಡಿ ಯಾವುದೇ ಅಪರಾಧವನ್ನು ಮಾಡಿರಲಿಲ್ಲ ಎಂದೂ ಭಟ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News