ಉತ್ತರಪ್ರದೇಶ: ಒಂದು ಮಗುವಿರುವವರಿಗೆ ಪ್ರೋತ್ಸಾಹ, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿ ನಿಷೇಧ

Update: 2021-07-10 10:29 GMT

ಲಕ್ನೋ: ಉತ್ತರ ಪ್ರದೇಶದ  ಆದಿತ್ಯನಾಥ್ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ  ಜನಸಂಖ್ಯಾ ನಿಯಂತ್ರಣ ಕಾಯಿದೆಯ ಕರಡು ಮಸೂದೆಯಲ್ಲಿನ ಕೆಲವು ನಿಬಂಧನೆಗಳ ಕುರಿತು ಮಾಧ್ಯಮವೊಂದು ವರದಿ ಮಾಡಿದೆ. 

ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರನ್ನು ಸರಕಾರಿ ಯೋಜನೆಗಳ ಸವಲತ್ತುಗಳಿಗೆ ಅನರ್ಹರನ್ನಾಗಿಸುವ ಜತೆಗೆ ಪ್ರತಿ ರೇಷನ್ ಕಾರ್ಡ್‍ನಲ್ಲಿ ಒಂದು ಕುಟುಂಬದ ನಾಲ್ಕು ಜನರ ಹೆಸರುಗಳಿಗೆ ಸೀಮಿತಗೊಳಿಸುವ ಪ್ರಸ್ತಾಪವಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರನ್ನು ಸ್ಥಳೀಯಾಡಳಿತ ಚುನಾವಣೆ ಸ್ಪರ್ಧಿಸುವುದಕ್ಕೆ ನಿಷೇಧಿಸುವ ಹೊರತಾಗಿ ಅವರಿಗೆ ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಕೂಡ ಅನುಮತಿಸಲಾಗುವುದಿಲ್ಲ.

ಇನ್ನೊಂದೆಡೆ ಎರಡು ಮಕ್ಕಳ ನೀತಿಯನ್ನು ಪಾಲಿಸುವವರಿಗೆ ಅವರ ಸೇವಾವಧಿಯಲ್ಲಿ ಎರಡು ಹೆಚ್ಚುವರಿ ವೇತನ ಹೆಚ್ಚಳ, ಸೈಟ್ ಅಥವಾ ಮನೆ ಖರೀದಿಗೆ ಸಬ್ಸಿಡಿ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಇಪಿಎಫ್‍ನಲ್ಲಿ ಶೇ3 ಹೆಚ್ಚಳವನ್ನು ನೀಡುವ ಪ್ರಸ್ತಾಪವಿದೆ. ಇದರ ಹೊರತಾಗಿ ಒಂದು ಮಗುವನ್ನು ಮಾತ್ರ ಹೊಂದುವವರಿಗೆ ಹಲವಾರು ಇತರ ಪ್ರೋತ್ಸಾಹಕಗಳೂ ದೊರೆಯಲಿವೆ.

ಕರಡು ಮಸೂದೆಯನ್ನು ರಾಜ್ಯ ಕಾನೂನು ಆಯೋಗದ  ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು ಸಾರ್ವಜನಿಕರ ಸಲಹೆಗಳನ್ನು ಕೇಳಲಾಗಿದೆ. ಸಲಹೆಗಳನ್ನು ಜುಲೈ 19ರೊಳಗಾಗಿ ನೀಡಬೇಕಿದೆ.

ಎರಡು ಮಕ್ಕಳ ನೀತಿಯ ವ್ಯಾಪ್ತಿಯಲ್ಲಿ ಬರುವವರಿಗೆ ಮಾತ್ರ ಈ ಪ್ರಸ್ತಾವಿತ ಕಾಯಿದೆಯ ಪ್ರಯೋಜನಗಳು ದೊರೆಯಲಿವೆ ಎಂದು ಕರಡು ನೀತಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಆದರೆ ಈ ಕರಡು ಮಸೂದೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಿಂತ ಮುನ್ನವೇ ಕಾನೂನು ಆಗಲಿದೆಯೇ ಎಂಬ ಕುರಿತು ಮಾಹಿತಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News