ಬಿಹಾರದಲ್ಲಿ ಸಂಪೂರ್ಣ ಪೊಲೀಸ್ ರಾಜ್ಯ ಇರುವಂತಿದೆ: ಸುಪ್ರೀಂಕೋರ್ಟ್ ಛಾಟಿಯೇಟು

Update: 2021-07-10 09:41 GMT

ಹೊಸದಿಲ್ಲಿ: ಶ್ರೀಮಂತ ವ್ಯಕ್ತಿಯೊಬ್ಬನ ಸ್ವಾತಂತ್ರ್ಯಹರಣಕ್ಕೆ ಹೋಲಿಸಿದಾಗ ಬಡ ವ್ಯಕ್ತಿಯೊಬ್ಬನ ಸ್ವಾತಂತ್ರ್ಯಹರಣ ಕಡಿಮೆಯೇನಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯ ಪಟ್ಟಿದೆ.

ಪಾಟ್ನಾ ಪೊಲೀಸರು 35 ದಿನಗಳಿಗೂ ಹೆಚ್ಚು ಕಾಲ ಟ್ರಕ್ ಚಾಲಕನೊಬ್ಬನನ್ನು ಅಕ್ರಮ ಬಂಧನದಲ್ಲಿರಿಸಿದ ಪ್ರಕರಣದಲ್ಲಿ ಸಂತ್ರಸ್ತನಿಗೆ ರೂ. 5 ಲಕ್ಷ ಪರಿಹಾರ ನೀಡಬೇಕೆಂದು ಪಾಟ್ನಾ ಹೈಕೋರ್ಟ್ ಡಿಸೆಂಬರ್ 22, 2020ರಂದು ನೀಡಿದ ತೀರ್ಪಿನ ವಿರುದ್ಧ ಬಿಹಾರ ಸರಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಜಸ್ಟಿಸ್ ಚಂದ್ರಚೂಡ್ ಹಾಗೂ ಜಸ್ಟಿಸ್ ಎಂ ಆರ್ ಶಾ ಅವರ ಪೀಠ ಮೇಲಿನಂತೆ ಹೇಳಿದೆ.

"ನಾವು ಜವಾಬ್ದಾರಿಯುತ ಆಡಳಿತವಾಗಿ ಈ ಪ್ರಕರಣದಲ್ಲಿ ಠಾಣಾಧಿಕಾರಿಯನ್ನು  ವಜಾಗೊಳಿಸಿದ್ದೇವೆ ಹಾಗೂ ಶಿಸ್ತು ಕ್ರಮ ಪ್ರಕ್ರಿಯೆ ಜಾರಿಯಲ್ಲಿದೆ" ಎಂದು ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.

ಆಗ ಪ್ರತಿಕ್ರಿಯಿಸಿದ ಜಸ್ಟಿಸ್ ಚಂದ್ರಚೂಡ್ "ಮೊದಲನೆಯದಾಗಿ ನೀವು ಈ ಮೇಲ್ಮನವಿ ಅರ್ಜಿ ಸಲ್ಲಿಸಲೇಬಾರದಾಗಿತ್ತು. ಆತನೊಬ್ಬ ಚಾಲಕನಾದುದರಿಂದ ರೂ 5 ಲಕ್ಷ ಪರಿಹಾರ ಬಹಳ ಹೆಚ್ಚಾಯಿತೇ? ಶ್ರೀಮಂತ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣವಾದರೆ ಹೆಚ್ಚಿನ  ಪರಿಹಾರ ನೀಡಬೇಕೆಂಬ ರೀತಿಯಲ್ಲಿ ಸ್ವಾತಂತ್ರ್ಯ ಹರಣದ ಪ್ರಕರಣವನ್ನು ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣದಲ್ಲಿ ಬಡ, ಶ್ರೀಮಂತವೆಂಬ ಬೇಧಭಾವವಿಲ್ಲ. ಹೈಕೋರ್ಟ್ ನೀಡಿದ್ದ ರೂ 5 ಲಕ್ಷ ಪರಿಹಾರ ಆದೇಶ ಸರಿಯಾಗಿದೆ, ಬಿಹಾರದಲ್ಲಿ ಸಂಪೂರ್ಣ ಪೊಲೀಸ್ ರಾಜ್ಯ ಇರುವಂತಿದೆ," ಎಂದು ಜಸ್ಟಿಸ್ ಚಂದ್ರಚೂಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News