ನೂತನ ಸಂಪುಟದಲ್ಲಿ ಶೇ. 42ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು, ಶೇ. 90ರಷ್ಟು ಮಂದಿ ಕೋಟ್ಯಧಿಪತಿಗಳು

Update: 2021-07-10 17:45 GMT

ಹೊಸದಿಲ್ಲಿ,ಜು.10: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ 36 ಹೊಸಮುಖಗಳನ್ನು ಸೇರಿಸಿಕೊಳ್ಳುವ ಮೂಲಕ ತನ್ನ ಸಚಿವ ಸಂಪುಟದ ಪುನರ್ರಚನೆಯನ್ನು ಮಾಡಿದ್ದು,ಸಚಿವರ ಒಟ್ಟು ಸಂಖ್ಯೆ 78ಕ್ಕೇರಿದೆ. ಇವರ ಪೈಕಿ 33 (ಶೇ.42) ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು,ಇವರಲ್ಲಿ 24 ಜನರ ವಿರುದ್ಧ ಕೊಲೆ,ಕೊಲೆ ಯತ್ನ ಮತ್ತು ದರೋಡೆಗೆ ಸಂಬಂಧಿಸಿದಂತೆ ಗಂಭೀರ ಪ್ರಕರಣಗಳಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ಹೇಳಿದೆ. ‌

ಅದು ಈ ಸಚಿವರು ತಮ್ಮ ಚುನಾವಣಾ ನಾಮಪತ್ರಗಳ ಜೊತೆ ಸಲ್ಲಿಸಿದ್ದ ಅಫಿಡವಿಟ್ಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ನೂತನ ಸಚಿವ ಮಂಡಳಿಯಲ್ಲಿ 70 (ಶೇ.90) ಸಚಿವರು ಕೋಟ್ಯಾಧೀಶರಾಗಿದ್ದಾರೆ ಎಂದೂ ವರದಿಯು ಹೇಳಿದೆ. ಜ್ಯೋತಿರಾದಿತ್ಯ ಸಿಂದಿಯಾ (379 ಕೋ.ರೂ.ಗೂ ಹೆಚ್ಚು),ಪಿಯೂಷ್ ಗೋಯಲ್ (95 ಕೋ.ರೂ.ಗೂ ಹೆಚ್ಚು), ನಾರಾಯಣ ರಾಣೆ(87 ಕೋ.ರೂ.ಗೂ ಹೆಚ್ಚು) ಮತ್ತು ರಾಜೀವ ಚಂದ್ರಶೇಖರ (64 ಕೋ.ರೂ.ಗೂ ಹೆಚ್ಚು) ಅವರನ್ನು 50 ಕೋ.ರೂ.ಗೂ ಹೆಚ್ಚಿನ ವೌಲ್ಯದ ಘೋಷಿತ ಆಸ್ತಿಗಳನ್ನು ಹೊಂದಿರುವ ‘ಹೆಚ್ಚು ಆಸ್ತಿಗಳಿರುವ ಸಚಿವರು’ ಎಂದು ವರ್ಗೀಕರಿಸಲಾಗಿದೆ.

ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿರುವ ಸಚಿವರ ಸಂಖ್ಯೆಯಲ್ಲಿ ವಿಸ್ತರಣೆಯ ಬಳಿಕ ಶೇ.3ರಷ್ಟು ಏರಿಕೆಯಾಗಿದೆ. 2019ರಲ್ಲಿ ಮೊದಲ ಸಚಿವ ಸಂಪುಟದ ಪದಗ್ರಹಣದ ಬಳಿಕ ಎಡಿಆರ್ ನಡೆಸಿದ್ದ ವಿಶ್ಲೇಷಣೆಯಲ್ಲಿ 56 ಸಚಿವರ ಪೈಕಿ ಶೇ.39ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿದ್ದರು. ಆ ಸಚಿವ ಸಂಪುಟದಲ್ಲಿಯೂ ಶೇ.91ರಷ್ಟು ಸಚಿವರು ಕೋಟ್ಯಾಧೀಶರಾಗಿದ್ದರು.

ಸರಕಾರದಲ್ಲಿಯ ಸಚಿವರ ಸರಾಸರಿ ಆಸ್ತಿ ಮೌಲ್ಯ ಸುಮಾರು 16.24 ಕೋ.ರೂ.ಗಳಷ್ಟಿದೆ. ತ್ರಿಪುರಾದ ಪ್ರತಿಮಾ ಭೌಮಿಕ್ (ಸುಮಾರು ಆರು ಲ.ರೂ.),ಪ.ಬಂಗಾಳದ ಜಾನ್ ಬಾರ್ಲಾ (ಸುಮಾರು 14 ಲ.ರೂ.),ರಾಜಸ್ಥಾನದ ಕೈಲಾಷ ಜೋಶಿ (ಸುಮಾರು 24 ಲ.ರೂ.),ಒಡಿಶಾದ ಬಿಶ್ವೇಶ್ವರ ತುಡು (ಸುಮಾರು 27 ಲ.ರೂ.) ಮತ್ತು ಮಹಾರಾಷ್ಟ್ರದ ವಿ.ಮುರಳೀಧರನ್ (ಸುಮಾರು 27 ಲ.ರೂ) ಅವರು ಕನಿಷ್ಠ ವೌಲ್ಯದ ಆಸ್ತಿಗಳನ್ನು ಹೊಂದಿರುವ ಸಚಿವರಾಗಿದ್ದಾರೆ ಎಂದು ವರದಿಯು ತಿಳಿಸಿದೆ.
 
21 ಸಚಿವರು ಸ್ನಾತಕೋತ್ತರ ಪದವಿ,ಒಂಭತ್ತು ಸಚಿವರು ಡಾಕ್ಟರೇಟ್ ಪಡೆದಿದ್ದರೆ,ತಲಾ 17 ಸಚಿವರು ಪದವೀಧರರು ಮತ್ತು ವೃತ್ತಿಪರ ಪದವೀಧರರಾಗಿದ್ದಾರೆ. ಇಬ್ಬರು ಸಚಿವರು ಕೇವಲ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ, ಮೂವರು 10ನೇ ತರಗತಿ ಮತ್ತು ಇತರ ಏಳು ಸಚಿವರು 12ನೇ ತರಗತಿಯ ವಿದ್ಯಾರ್ಹತೆಗಳನ್ನು ಹೊಂದಿದ್ದಾರೆ ಎಂದೂ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News