ವೀಸಾ ನಿಯಮ ಉಲ್ಲಂಘಿಸಿದ್ದಾರೆಂದು ನ್ಯೂಜಿಲೆಂಡ್ ಯುಟ್ಯೂಬರ್ ಕಾರ್ಲ್ ರಾಕ್ ಭಾರತ ಪ್ರವೇಶ ನಿರ್ಬಂಧಿಸಿದ ಸರಕಾರ

Update: 2021-07-10 11:50 GMT

ಹೊಸದಿಲ್ಲಿ: ನ್ಯೂಜಿಲೆಂಡ್ ಮೂಲದ ಯುಟ್ಯೂಬರ್ ಕಾರ್ಲ್ ರಾಕ್ ಅವರಿಗೆ ಕಳೆದ ಅಕ್ಟೋಬರ್ ತಿಂಗಳಿನಿಂದ ಭಾರತ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಅವರು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಇಂದು ಹೇಳಿದೆ.

ದಿಲ್ಲಿಯ ಯುವತಿಯೊಬ್ಬರನ್ನು ವಿವಾಹವಾಗಿರುವ ರಾಕ್ ಅವರನ್ನು  ಕೇಂದ್ರ ಕಪ್ಪು ಪಟ್ಟಿಗೆ ಸೇರಿಸಿರುವುದನ್ನು ಈಗಾಗಲೇ ಹಲವು ಪ್ರಾಧಿಕಾರಗಳಲ್ಲಿ ಪ್ರಶ್ನಿಸಲಾಗಿದೆಯಾದರೂ ಫಲ ನೀಡಿಲ್ಲ. ಅವರ ಪತ್ನಿ ಮನಿಷಾ ಮಲಿಕ್ ಅವರು  ಕೇಂದ್ರದ ಕ್ರಮವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‍ನ ಕದ ತಟ್ಟಿದ್ದಾರೆ. ಈ ಅಪೀಲಿನ  ವಿಚಾರಣೆ ಮುಂದಿನ ವಾರ ನಡೆಯುವ ಸಾಧ್ಯತೆಯಿದೆ. ಘನತೆಯಿಂದ ಬದುಕುವ ಹಾಗೂ ಸರಕಾರವನ್ನು ವಿರೋಧಿಸುವ ಹಕ್ಕನ್ನು ನೀಡುವ ಸಂವಿಧಾನದ 21ನೇ ವಿಧಿಯನ್ನು ಆಕೆ ತಮ್ಮ ಅಪೀಲಿನಲ್ಲಿ ಉಲ್ಲೇಖಿಸಿದ್ದಾರೆ.

ಕಾರ್ಲ್ ರಾಕ್ ಅವರ ನಿಜ ನಾಮಧೇಯ ಕಾರ್ಲ್ ಎಡ್ವರ್ಡ್ ರೈಸ್ ಆಗಿದ್ದು ಪ್ರಯಾಣ ಸುರಕ್ಷತೆ, ಆಸಕ್ತಿದಾಯಕ ಪ್ರವಾಸಿ ತಾಣಗಳು,  ವಂಚನೆಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬಿತ್ಯಾದಿ ವಿಷಯಗಳ ವೀಡಿಯೋಗಳನ್ನು ಅವರು ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ತಯಾರಿಸುತ್ತಾರಲ್ಲದೆ ಯುಟ್ಯೂಬ್‍ನಲ್ಲಿ ಅವರಿಗೆ 18 ಕೋಟಿಗೂ ಅಧಿಕ ಚಂದಾದಾರರಿದ್ದಾರೆ. ಎಪ್ರಿಲ್ 2019ರಲ್ಲಿ ಅವರು ಮನಿಷಾ ಅವರನ್ನು ವಿವಾಹವಾದ ನಂತರ ಅವರಿಗೆ ಎಕ್ಸ್-2 ವೀಸಾ  ನೀಡಲಾಗಿತ್ತು ಹಾಗೂ ಇದು ಮೇ 2024ರ ತನಕ ಊರ್ಜಿತದಲ್ಲಿತ್ತು. ವೀಸಾ ಷರತ್ತಿನಂತೆ ಅವರು ಪ್ರತಿ 180 ದಿನಗಳಿಗೊಮ್ಮೆ ಭಾರತ ಬಿಟ್ಟು ತೆರಳಬೇಕು ಅಥವಾ ಫಾರಿನ್ ರೀಜನಲ್ ರಿಜಿಸ್ಟ್ರೇಶನ್ ಕಚೇರಿಗೆ ಮಾಹಿತಿ ನೀಡಬೇಕಿದೆ. ಇದೇ ನಿಯಮಾನುಸಾರ ಅವರು ಕಳೆದ ವರ್ಷದ ಅಕ್ಟೋಬರ್‍ನಲ್ಲಿ ದುಬೈಗೆ ತೆರಳಿದ್ದು ಅಂದಿನಿಂದ  ಭಾರತಕ್ಕೆ ಅವರಿಗೆ ಬರಲು ಸಾಧ್ಯವಾಗಿಲ್ಲ.

ಅದಕ್ಕೆ ಸರಿಯಾದ ಕಾರಣ ನೀಡಿಲ್ಲ, ಕುಟುಂಬವನ್ನು 269 ದಿನಗಳಿಂದ ಭೇಟಿಯಾಗಿಲ್ಲ ಎಂದು ಅವರು ವೀಡಿಯೋವೊಂದರಲ್ಲಿ ಹೇಳಿದ್ದಾರೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಅವರಿಗೆ ದುಬೈಯಲ್ಲಿನ ಭಾರತೀಯ ಹೈಕಮಿಷನ್ ನೀಡಿತ್ತು.

ಅವರು ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಮುಂದಿನ ವರ್ಷದ ತನಕ ಭಾರತಕ್ಕೆ ಪ್ರವೇಶವಿಲ್ಲ. ಅವರು ಇಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಗೃಹ ಸಚಿವಾಲಯ ಹೇಳಿದೆ.

ಅವರು ಕಳೆದ ವರ್ಷ ವಿವಾದಿತ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಟ್ವೀಟ್‍ಗಳನ್ನು ಮಾಡಿದ್ದನ್ನು ಕೆಲವು ಟ್ವಿಟ್ಟರಿಗರು ಬೊಟ್ಟು ಮಾಡಿ ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News