ಹರ್ಯಾಣ: ಎರಡು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕ್ರಮಗಳಲ್ಲಿ ನಾಯಕರ ವಿರುದ್ಧ ರೈತರ ಪ್ರತಿಭಟನೆ, ಪೊಲೀಸರೊಂದಿಗೆ ಸಂಘರ್ಷ

Update: 2021-07-10 15:12 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.10: ಹರ್ಯಾಣದ ಯಮುನಾ ನಗರ ಮತ್ತು ಹಿಸ್ಸಾರ್ ಜಿಲ್ಲೆಗಳಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಬಿಜೆಪಿ ನಾಯಕರ ವಿರುದ್ಧ ಕುಪಿತ ರೈತರು ಪ್ರತಿಭಟನೆಗಳನ್ನು ನಡೆಸಿದ್ದು,ಈ ಸಂದರ್ಭ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗಳೂ ನಡೆದವು. ‌

ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ರೈತರು ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದು,ಈಗ ಅವರಲ್ಲಿ ಕೆಲ ವರ್ಗಗಳು ಬಿಜೆಪಿ ಪದಾಧಿಕಾರಿಗಳನ್ನು ಪ್ರತ್ಯೇಕವಾಗಿ ಗುರಿಯಾಗಿಸಿಕೊಳ್ಳುತ್ತಿವೆ. ಹರ್ಯಾಣದ ಮನೋಹರಲಾಲ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರವು ಹಲವಾರು ತಿಂಗಳುಗಳಿಂದಲೂ ದಿಲ್ಲಿಗೆ ತೆರಳುವ ರಸ್ತೆಗಳಲ್ಲಿ ತಡೆಗಳನ್ನೊಡ್ಡುವ ಮತ್ತು ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸುವ ಅಥವಾ ನಿಧಾನಗೊಳಿಸುವ ಮೂಲಕ ರೈತರ ಪ್ರತಿಭಟನೆಯನ್ನು ಬಗ್ಗುಬಡಿಯಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

ರಾಜ್ಯದ ಸಾರಿಗೆ ಸಚಿವ ಮೂಲಚಂದ ಶರ್ಮಾ ಅವರು ಯಮುನಾ ನಗರದಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದರು. ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ-ಜನನಾಯಕ ಜನತಾ ಪಾರ್ಟಿ(ಜೆಜೆಪಿ)ಯ ನಾಯಕರಿಗೆ ಭಾಷಣ ಮಾಡಲು ಅವಕಾಶ ನೀಡಕೂಡದು ಎಂದು ರೈತರು ಮೊದಲೇ ಎಚ್ಚರಿಸಿದ್ದರು.


ಈ ಬೆದರಿಕೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್ಗಳನ್ನು ಸ್ಥಾಪಿಸಲಾಗಿತ್ತು. ಆದರೆ ಟ್ರಾಕ್ಟರ್ಗಳಲ್ಲಿ ಆಗಮಿಸಿದ್ದ ರೈತರು ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದ್ದರು. 

ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗಳೂ ನಡೆದವು.
ಹಿಸ್ಸಾರ್ನಲ್ಲಿ ಗುರು ಜಂಬೇಶ್ವರ ವಿವಿಯಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ ಧಂಕರ್ ಅವರು ಭಾಷಣವನ್ನು ಮಾಡಲಿದ್ದರು. ವಿವಿಯ ಮುಖ್ಯದ್ವಾರದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. 

ರೈತರು ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿದ್ದು,ಪ್ರತಿಭಟನಾಕಾರರ ವಿರೋಧದಿಂದಾಗಿ ಬಿಜೆಪಿಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ವಿವಿಯು ಶುಕ್ರವಾರ ಪ್ರಕಟಿಸಿತ್ತು. ಆದರೂ ಕಾರ್ಯಕ್ರಮವನ್ನು ನಡೆಸಿದ್ದು ರೈತರನ್ನು ಕೆರಳಿಸಿತ್ತು. ಕಪ್ಪು ಪತಾಕೆಗಳೊಂದಿಗೆ ಪ್ರತಿಭಟನೆಯ ಎಚ್ಚರಿಕೆಯನ್ನು ರೈತರು ನೀಡಿದ್ದರು. ತನ್ಮಧ್ಯೆ ಕಾರ್ಯಕ್ರಮ ಆರಂಭವಾದ ಬಳಿಕ ಧಂಕರ್ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News