ಚತ್ತೀಸ್ ಗಢ ಐಪಿಎಸ್ ಅಧಿಕಾರಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

Update: 2021-07-10 17:47 GMT

ರಾಯಪುರ, ಜು. 9: ಚತ್ತೀಸ್ ಗಢ ಸರಕಾರದ ವಿರುದ್ಧ ‘ಪಿತೂರಿ’ ನಡೆಸಿದ ಆರೋಪದಲ್ಲಿ ಐಪಿಎಸ್ ಅಧಿಕಾರಿ ಜಿ.ಪಿ. ಸಿಂಗ್ ವಿರುದ್ಧ ಚತ್ತೀಸ್ ಗಢ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಜಿಪಿ ಸಿಂಗ್ ಅವರ ಕಟ್ಟಡಗಳ ಮೇಲೆ ರಾಜ್ಯ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ಹಾಗೂ ಆರ್ಥಿಕ ಅಪರಾಧಗಳ ದಳ ದಾಳಿ ನಡೆಸಿತ್ತು. ಅಲ್ಲದೆ, ಆಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ವಾರದ ಆರಂಭದಲ್ಲಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಜಿ.ಪಿ. ಸಿಂಗ್ ಸರಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ದ್ವೇಷ ಉತ್ತೇಜನ ಹಾಗೂ ಪಿತೂರಿಯಲ್ಲಿ ಭಾಗಿಯಾರುವುದು ದಾಳಿ ವೇಳೆ ಪತ್ತೆಯಾದ ದಾಖಲೆಗಳಲ್ಲಿ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೆ ಸಂಬಂಧಿಸಿ ಭ್ರಷ್ಟಾಚಾರ ವಿರೋಧಿ ದಳ ಹಾಗೂ ಆರ್ಥಿಕ ಅಪರಾಧಗಳ ದಳ ಸಲ್ಲಿಸಿದ ವರದಿಯ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News