ನಾಯಿಯ ವಿರುದ್ಧ ಕ್ರೌರ್ಯ: ಪ್ರಾಣಿ ರಕ್ಷಣಾ ಕೇಂದ್ರ ಮುಚ್ಚಿದ ಮೇನಕಾ ಗಾಂಧಿ

Update: 2021-07-10 17:54 GMT

ಹೊಸದಿಲ್ಲಿ, ಜು. 9: ಚಿಕಿತ್ಸೆಗೆ ಒಳಗಾದ ಬೀದಿ ನಾಯಿ ಮೇಲಿನ ಕ್ರೌರ್ಯದ ವೀಡಿಯೊ ವೈರಲ್ ಆದ ಬಳಿಕ ಕೂಲಂಕುಷ ಪರಿಶೀಲನೆಗಾಗಿ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ದಿಲ್ಲಿಯ ಸಂಜಯ್ ಗಾಂಧಿ ಪ್ರಾಣಿ ರಕ್ಷಣಾ ಕೇಂದ್ರವನ್ನು ಮುಚ್ಚಲಾಗಿದೆ. ‌

ಸಂಜಯ್ ಗಾಂಧಿ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆಗೊಳಗಾದ ನಾಯಿ ಕೇಂದ್ರದ ವೈದ್ಯರಿಂದ ಕ್ರೌರ್ಯಕ್ಕೊಳಗಾಗಿ ಅನಂತರ ಸಾವನ್ನಪ್ಪಿತ್ತು. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು. ಇತ್ತೀಚೆಗೆ ಇಲ್ಲಿನ ಪ್ರಾಣಿಗಳಿಗೆ ಚಿಕಿತ್ಸೆ ಒದಗಿಸಲು ಅರೆ ಪಶು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿತ್ತು ಎಂದು ಮೇನಕಾ ಗಾಂಧಿ ಅವರು ಟ್ವೀಟ್ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದರು. ಇಲ್ಲಿಗೆ ಚಿಕಿತ್ಸೆಗೆಂದು ತಂದ ನಾಯಿಗೆ ಸಿಬ್ಬಂದಿ ಥಳಿಸುತ್ತಿರುವ ವೀಡಿಯೊವನ್ನು ಪ್ರಾಣಿಗಳ ಹಕ್ಕು ಹೋರಾಟಗಾರ್ತಿ ಕಾವೇರಿ ಭಾರದ್ವಾಜ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದರು.

ಪ್ರಾಣಿ ರಕ್ಷಣಾ ಕೇಂದ್ರದ ಸಿಬ್ಬಂದಿ ಎಂದು ಹೇಳುತ್ತಿರುವ ಮಹಿಳೆಯೋರ್ವರು, ಇಲ್ಲಿ ನಾಯಿ ಅನುಭವಿಸಿದ ಚಿತ್ರಹಿಂಸೆಯ ಕುರಿತ ವಿವರಣೆಯ ವೀಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಈ ವೀಡಿಯೊಗಳು ವೈರಲ್ ಆದ ಬಳಿಕ ಮೇನಕಾ ಗಾಂಧಿ ಈ ಕೃತ್ಯದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು. ‘‘ವೀಡಿಯೊ ನೋಡಿದ ಕೂಡಲೇ ಪ್ಯಾರಾ ಪಶು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದೆ. ಅವರನ್ನು ಬಂಧಿಸಲಾಗಿದೆ’’ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News