ಜೆಡಿಯು ವಿಭಜನೆಯತ್ತ ಸಾಗಿದೆ, ಬಿಹಾರದಲ್ಲಿ ಮಧ್ಯಂತರ ಚುನಾವಣೆ ಸಾಧ್ಯತೆ: ಚಿರಾಗ್ ಪಾಸ್ವಾನ್

Update: 2021-07-10 17:58 GMT

ಪಾಟ್ನಾ, ಜು. 9: ಬಿಹಾರದಾದ್ಯಂತ ‘ಆಶೀರ್ವಾದ್ ಯಾತ್ರೆ’ ನಡೆಸುತ್ತಿರುವ ಜಮುಯಿ ಎಲ್ಜೆಪಿ ಸಂಸದ ಚಿರಾಗ್ ಪಾಸ್ವಾನ್, ಜೆಡಿಯುನಲ್ಲಿ ಮಹತ್ವದ ವಿಭಜನೆಯಾಗಲಿದ್ದು, ನಿತೀಶ್ ಕುಮಾರ್ ನೇತೃತ್ವದ ಸರಕಾರ ಪತನವಾಗಲಿದೆ. ಇದರಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ತನ್ನ ಚಿಕ್ಕಪ್ಪ ಪಶುಪತಿ ಕುಮಾರ್ ಪರಸ್ (ಕೇಂದ್ರ ಸರಕಾರದ ನೂತನ ಆಹಾರ ಸಂಸ್ಕರಣೆ ಸಚಿವ) ಸೇರಿದಂತೆ ಐವರು ಸಂಸದರಿಂದ ಬಂಡಾಯ ಎದುರಿಸಿದ ಬಳಿಕ ಚಿರಾಗ್ ಪಾಸ್ವಾನ್ ಅವರು ಜುಲೈ 5ರಿಂದ ಹಾಜಿಪುರದಿಂದ ‘ಆಶೀರ್ವಾದ ಯಾತ್ರೆ’ ನಡೆಸುತ್ತಿದ್ದಾರೆ. ‌

‘‘ಮುಂದಿನ ಕೆಲವೇ ದಿನಗಳಲ್ಲಿ ಜೆಡಿಯುನಲ್ಲಿ ಅತಿ ಮಹತ್ವದ ವಿಭಜನೆಯಾಗಲಿದೆ. ಇದು ಬಿಹಾರದಲ್ಲಿ ಮಧ್ಯಂತರ ವಿಧಾನ ಸಭೆ ಚುನಾವಣೆಗೆ ಅವಕಾಶ ಮಾಡಿ ಕೊಡಲಿದೆ’’ ಎಂದು ಶುಕ್ರವಾರ ಬೇಗುಸರಾಯ್ಗೆ ತಲುಪಿದ ‘ಆಶೀರ್ವಾದ್ ಯಾತ್ರೆ’ ಸಂದರ್ಭ ಸಾವಿರಾರು ಬೆಂಬಲಿಗರ ಮುಂದೆ ಚಿರಾಗ್ ಪಾಸ್ವಾನ್ ಹೇಳಿದರು. 

ಈ ಸಂದರ್ಭ ಅವರು ತನ್ನ ಚಿಕ್ಕಪ್ಪ, ಹಾಜಿಪುರದ ಸಂಸದ ಪಶುಪತಿ ಪರಾಸ್ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಎರಡು ದಿನಗಳ ಹಿಂದೆ ಪಶುಪತಿ ಕುಮಾರ್ ಪರಾಸ್ ಅವರು, ರಾಮ ವಿಲಾಸ್ ಪಾಸ್ವಾನ್ (ದಿವಂಗತ) ಸ್ಥಾಪಿಸಿದ ಎಲ್ಜಿಪಿಯ ರಾಜಕೀಯ ಉತ್ತರಾಧಿಕಾರಿ ತಾನೆಂದು ಹೇಳಿಕೊಂಡಿದ್ದರು. ‘‘ಚಿರಾಗ್ ನಿಧನರಾದ ನನ್ನ ಸಹೋದರನ ಪುತ್ರ. ಆದರೆ, ಪಕ್ಷದಲ್ಲಿ ನಾನು ಸಹೋದರನ ಉತ್ತರಾಧಿಕಾರಿ. ಒಂದು ವೇಳೆ ಅವರು (ಚಿರಾಗ್) ಕೇಂದ್ರ ಸಂಪುಟದಲ್ಲಿ ನನ್ನ ನಿಯೋಜನೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರೆ, ಯಾವುದೇ ಸಮಸ್ಯೆ ಇಲ್ಲ. ನಾನು ಅದರ ವಿರುದ್ಧ ಹೋರಾಟ ನಡೆಸಲಿದ್ದೇನೆ’’ ಎಂದು ಪರಾಸ್ ಹೇಳಿದ್ದಾರೆ. 

ಚಿಕ್ಕಪ್ಪ ಪಶುಪತಿ ಪರಾಸ್ ಅವರ ಬಂಡಾಯ ಹಾಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ಕುರಿತಂತೆ ಪ್ರತಿಕ್ರಿಯಿಸಿರುವ ಚಿರಾಗ್ ಪಾಸ್ವಾನ್, ರಾಜಕೀಯದಲ್ಲಿ ಎಲ್ಲ ಸಾಧ್ಯತೆಗಳು ಮುಕ್ತವಾಗಿರುತ್ತವೆ. ಸಂದರ್ಭಗಳನ್ನು ಅವಲಂಬಿಸಿ ಸೂಕ್ತ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News