ಅಸ್ಸಾಂನ ಪ್ರಸ್ತಾವಿತ ಗೋಸಂರಕ್ಷಣಾ ಮಸೂದೆ: ಹಿಂದೂ, ಜೈನ, ಸಿಖ್ ಪ್ರದೇಶಗಳಲ್ಲಿ ಬೀಫ್ ಮಾರಾಟ, ಖರೀದಿ ನಿಷೇಧ
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಆವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಅಸ್ಸಾಂ ಗೋಸಂರಕ್ಷಣಾ ಮಸೂದೆ 2021, ಹಿಂದು, ಜೈನ, ಸಿಖ್ ಮತ್ತು ಇತರ ಗೋಮಾಂಸ ಸೇವಿಸದ ಸಮುದಾಯಗಳು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಅಥವಾ ಯಾವುದೇ ದೇವಸ್ಥಾನ ಅಥವಾ ಸಥ್ರ (ವೈಷ್ಣವರ ಆರಾಧನಾಲಯಗಳು) ಇವುಗಳ 5 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಗೋಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಹೊಂದಿದೆ.
ರಾಜ್ಯದಲ್ಲಿ ಗೋಹತ್ಯೆ, ಗೋಮಾಂಸ ಭಕ್ಷಣೆ ಮತ್ತು ಅಕ್ರಮ ಗೋಸಾಗಟ ತಡೆಯುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ.
ಗೋಹತ್ಯೆ ತಡೆ ಕಾಯಿದೆಗಳನ್ನು ಹಲವು ರಾಜ್ಯಗಳು ಜಾರಿಗೊಳಿಸಿವೆಯಾದರೂ ಯಾವುದೇ ರಾಜ್ಯಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ, ಖರೀದಿಯನ್ನು ನಿರ್ಬಂಧಿಸಲಾಗಿಲ್ಲ.
ಅಸ್ಸಾಂನಲ್ಲಿ ಈ ಪ್ರಸ್ತಾವಿತ ಮಸೂದೆ ಅಂಗೀಕಾರಗೊಂಡರೆ ಅದು ಅಸ್ಸಾಂ ಗೋಸಂರಕ್ಷಣಾ ಕಾಯಿದೆ, 1950 ಬದಲಿಗೆ ಜಾರಿಯಾಗಲಿದೆ. ಈ ಹಳೆಯ ಕಾನೂನು ಗೋಸಂರಕ್ಷಣೆಗೆ ಸೂಕ್ತ ಕಾನೂನಾತ್ಮಕ ನಿಬಂಧನೆಗಳನ್ನು ಹೊಂದಿಲ್ಲ ಎಂದು ಮುಖ್ಯಮಂತ್ರಿ ಶರ್ಮ ಹೇಳಿದ್ದಾರೆ.
ಈ ಕರಡು ಮಸೂದೆಯಂತೆ ಗೋಹತ್ಯೆಗೆ ಸಂಬಂಧಿತ ಪ್ರಾಧಿಕಾರಗಳ ಅನುಮತಿ ಅಗತ್ಯವಾಗಿದ್ದು ಹಾಗೂ ಗೋವುಗಳ ವಧೆಯನ್ನು ಪರವಾನಗಿ ಹೊಂದಿದ ಕಸಾಯಿಖಾನೆಗಳಲ್ಲಿ ಸರಕಾರಿ ಪಶುವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆದ ನಂತರವಷ್ಟೇ ಮಾಡಬಹುದಾಗಿದೆ.
ಈ ಪ್ರಸ್ತಾವಿತ ಕಾನೂನಿನಂತೆ ಎಸ್ಸೈ ಹಾಗೂ ಮೇಲಿನ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳಿಗೆ ಯಾವುದೇ ಕಸಾಯಿಖಾನೆ ಪ್ರವೇಶಿಸಿ ಅಲ್ಲಿ ಉಲ್ಲಂಘನೆಗಳಾಗುತ್ತಿವೆಯೇ ಎಂದು ಪರಿಶೀಲಿಸುವ ಅಧಿಕಾರ ದೊರೆಯಲಿದೆ.
ಪ್ರಸ್ತಾವಿತ ಕಾಯಿದೆಯಂತೆ ಆರೋಪಿಗಳ ಅಪೀಲನ್ನು ಸಾರ್ವಜನಿಕ ಅಭಿಯೋಜಕರು ಕೇಳುವ ತನಕ ಅವರಿಗೆ ಜಾಮೀನು ದೊರೆಯುವುದಿಲ್ಲ ಹಾಗೂ ತಪ್ಪಿತಸ್ಥರು ಮೂರರಿಂದ ಎಂಟು ವರ್ಷಗಳ ತನಕ ಜೈಲು ಶಿಕ್ಷೆಯ ಜತೆಗೆ ರೂ 3 ಲಕ್ಷದಿಂದ ರೂ 5 ಲಕ್ಷ ತನಕ ದಂಡ ತೆರಬೇಕಾಗುತ್ತದೆ ಎಂದು ತಿಳಿದು ಬಂದಿದೆ.