ಗಿರಿಧಾಮ, ನಗರದ ಮಾರುಕಟ್ಟೆಗಳಲ್ಲಿ ಜನರು ಮಾಸ್ಕ್ ಧರಿಸದೇ ಇರುವುದು ಕಳವಳಕಾರಿ: ಪ್ರಧಾನಿ ಮೋದಿ

Update: 2021-07-13 16:46 GMT

ಹೊಸದಿಲ್ಲಿ,ಜು.13: ಕೋವಿಡ್19 ಮೂರನೆ ಅಲೆಯ ಅಪ್ಪಳಿಸುವ ಭೀತಿಯು ದೇಶವನ್ನು ಕಾಡುತ್ತಿರುವಾಗಲೇ, ಮಾಸ್ಕ್ ಧರಿಸದೆ ಹಾಗೂ ಸುರಕ್ಷಿತ ಅಂತರ ವಿಲ್ಲದೆ ಗಿರಿಧಾಮಗಳಿಗೆ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ.
   ‌
ಈಶಾನ್ಯ ಭಾರತದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದರು. ಕೋವಿಡ್19ನ ಮೂರನೆ ಅಲೆ ಅಪ್ಪಳಿಸುವುದನ್ನು ತಡೆಯಲು ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡದಿವುದು ಹಾಗೂ ಲಸಿಕೀಕರಣವನ್ನು ಖಾತರಿಪಡಿಸುವಂತಹ ಕೋವಿಡ್19 ಶಿಷ್ಟಾಚಾರಗಳನ್ನು ಪಾಲಿಸಬೇಕೆಂದು ಪ್ರಧಾನಿ ಕರೆ ನೀಡಿದರು.

‘‘ ಕೋವಿಡ್19 ಸಾಂಕ್ರಾಮಿಕದ ಹಾವಳಿಯಿಂದಾಗಿ ಪ್ರವಾಸೋದ್ಯಮ ಹಾಗೂ ಉದ್ಯಮಗಳ ಮೇಲೆ ತೀವ್ರವಾದ ಪರಿಣಾಮವುಂಟಾಗಿರುವುದು ನಿಜವಾದುದಾಗಿದೆ. ಆದರೆ, ಗಿರಿಧಾಮಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಜನರು ಮಾಸ್ಕ್ ಗಳಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದು ಸರಿಯಲ್ಲವೆಂದು ನಾನು ಒತ್ತಿ ಹೇಳುತ್ತಿದ್ದೇನೆ ಎಂದರು. ಕೋವಿಡ್19 ಸಾಂಕ್ರಾಮಿಕದ ಮೂರನೆ ಅಲೆಯನ್ನು ತಡೆಯಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುವ ಅಗತ್ಯವಿದೆಯೆಂದು ಅವರು ಹೇಳಿದರು.

ಕೊರೋನ ವೈರಸ್ ನ ಪ್ರತಿಯೊಂದು ನೂತನ ಪ್ರಭೇದದ ಬಗ್ಗೆಯೂ ಕಣ್ಣಿಡುವಂತೆ ಕರೆ ನೀಡಿದ ಪ್ರಧಾನಿ ಅವರು ರೂಪಾಂತರಗೊಂಡ ವೈರಸ್ ಜನರಿಗೆ ಹೇಗೆ ಮಾರಕವಾಗುತ್ತಿವೆಯೆಂಬ ಬಗ್ಗೆ ತಜ್ಞರು ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದಾರೆಂದು ಹೇಳಿದರು. ಇಂತಹ ಸನ್ನಿವೇಶದಲ್ಲಿ ಸೋಂಕು ಹರಡುವುದನ್ನು ತಡೆಯುವುದು ಹಾಗೂ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯವೆಂದು ಅವರು ಹೇಳಿದರು. ಕೋರೊನ ಸೋಂಕಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಸುಧಾರಣೆಯನ್ನು ಮುನ್ನಡೆಸಬೇಕಾಗಿದೆ. ಇದಕ್ಕಾಗಿ ಕೇಂದ್ರ ಸಂಪುಟವು 23 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ ಎಂದರು.
 
ಈಶಾನ್ಯ ಭಾರತದ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೋವಿಡ್-19 ಪರಿಸ್ಥಿತಿ ತೀರಾ ಆತಂಕಕಾರಿಯಾಗಿದೆ ಎಂದರು ಪ್ರಧಾನಿ ತಿಳಿಸಿದರು ಹಾಗೂ ಕೊರೋನ ವೈರಸ್ ನ ಹರಡುವಿಕೆಯನ್ನು ತಡೆಯಲು ಕಟ್ಟೆಚ್ಚರ ವಹಿಸುವಂತೆ ಹಾಗೂ ತ್ವರಿತವಾಗಿ ಕಾರ್ಯಾಚರಿಸುವಂತೆ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News