ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಮಹಿಳೆ, ಮೂವರು ಮಕ್ಕಳನ್ನು ರಕ್ಷಿಸಿದ ಹೈದರಾಬಾದ್ ಯುವಕ

Update: 2021-07-13 10:43 GMT
 Photo: thenewsminute

ಹೈದರಾಬಾದ್ : ಹೈದರಾಬಾದ್‍ನ ಪಿವಿಎನ್‍ಆರ್ ಎಕ್ಸ್ ಪ್ರೆಸ್ ಹೈವೇಯ ಅತ್ತಾಪುರ್ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗಿದ್ದ ಮಹಿಳೆ ಮತ್ತಾಕೆಯ ಎರಡು ತಿಂಗಳ ಮಗುವಿನ ಸಹಿತ ಮೂವರು ಮಕ್ಕಳನ್ನು ಪವಾಡಸದೃಶವಾಗಿ ರಕ್ಷಿಸಿದ ನಗರ ನಿವಾಸಿ ಜಿ ರವಿ ಎಲ್ಲರಿಂದ ಶ್ಲಾಘನೆಗೊಳಗಾಗಿದ್ದಾರೆ.

ರವಿ ಅವರು ಎಂದಿನಂತೆ ತಮ್ಮ ಮಾಲಿಕರನ್ನು ಕಾರಿನಲ್ಲಿ ಅವರ ಕಚೇರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಹೆದ್ದಾರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ನೋಡಿದರಲ್ಲದೆ ಅದರೊಳಗೆ ಜನರಿದ್ದಾರೆಂದು ಅರಿತರು. ತಡ ಮಾಡದೆ ಕಾರಿನಿಂದ ಹೊರಗೋಡಿದ ಅವರು ಕ್ಷಣಮಾತ್ರದಲ್ಲಿ ಕಾರಿನ ಕಿಟಿಕಿ ಗಾಜನ್ನು ಒಡೆದು ಮಹಿಳೆ ಮತ್ತಾಕೆಯ ಮೂವರು ಮಕ್ಕಳನ್ನು ರಕ್ಷಿಸಿದರು. ಅಚ್ಚರಿಯೆಂದರೆ ಅವರ್ಯಾರಿಗೂ ಒಂದಿನಿತೂ ಗಾಯಗಳುಂಟಾಗಿರಲಿಲ್ಲ. ಆದರೆ ಕಾರು ಸುಟ್ಟು ಕರಕಲಾಗಿದೆ.

ಶಂಶಾಬಾದ್‍ನಿಂದ ಶೈಲಜಾ ಎಂಬ ಮಹಿಳೆ ತಮ್ಮ ಮೂವರು ಮಕ್ಕಳೊಂದಿಗೆ ಜುಬಿಲಿ ಹಿಲ್ಸ್ ಪ್ರದೇಶದಲ್ಲಿರುವ ಆಸ್ಪತ್ರೆಗೆ ತೆರಳುತ್ತಿದ್ದಾಗ ಕಾರಿನ ಇಂಜಿನಿನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಬೆಂಕಿ ಹತ್ತಿಕೊಂಡಿತ್ತು.

ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರಾಜನ್ ಅವರ ವಾಹನ ಅದೇ ಹಾದಿಯಲ್ಲಿ ತೆರಳಲಿದ್ದುದರಿಂದ ಕೆಲಕಾಲ ಆತಂಕ ಸೃಷ್ಟಿಯಾದರೂ ರಾಜ್ಯಪಾಲರ ವಾಹನ ಪಡೆ ಆಗಮಿಸುವುದರೊಳಗಾಗಿ ರಸ್ತೆ ಸಂಚಾರ ಸುಗಮಗೊಂಡಿತ್ತು.

"ಅವರನ್ನೆಲ್ಲಾ ರಕ್ಷಿಸಿದೆನೆಂದು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ. ಉರಿಯುತ್ತಿದ್ದ ಕಾರಿನತ್ತ ಧಾವಿಸುವ ಭರದಲ್ಲಿ ನನ್ನ ಕಾಲ್ಬೆರಳಿಗೆ ಗಾಯವಾಯಿತು. ಆದರೆ ನಾನು ಅದರತ್ತ ಗಮನ ನೀಡಲಿಲ್ಲ" ಎಂದು ರವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News