ನಾಸಿಕ್: ಸೋರಿಕೆಯಾದ ಆಮಂತ್ರಣ ಪತ್ರಿಕೆ, ಬೆದರಿಕೆಗಳ ನಂತರ ಅಂತರ್ಧಮೀಯ ವಿವಾಹ ಕಾರ್ಯಕ್ರಮ ರದ್ದು
ಹೊಸದಿಲ್ಲಿ: ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ನಡುವೆ ನಾಸಿಕ್‍ನಲ್ಲಿ ಜುಲೈ 18ರಂದು ನಡೆಯಬೇಕಿದ್ದ ವಿವಾಹ ಸಂಬಂಧಿತ ಸಮಾರಂಭದ ಆಮಂತ್ರಣ ಪತ್ರಿಕೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿ ಹಲವಾರು ವಾಟ್ಸ್ಯಾಪ್ ಗ್ರೂಪುಗಳಲ್ಲಿ ಶೇರ್ ಕೂಡ ಆದ ಪರಿಣಾಮ ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಾರಂಭವನ್ನು ರದ್ದುಗೊಳಿಸಲಾಗಿದೆ.
ಸಮಾರಂಭ ರದ್ದುಗೊಂಡಿದೆಯಾದರೂ ಜೋಡಿ ಈಗಾಗಲೇ ನಾಸಿಕ್ ನ್ಯಾಯಾಲಯದಲ್ಲಿ ಎರಡೂ ಕುಟುಂಬಗಳ ಸದಸ್ಯರ ಉಪಸ್ಥಿತಿಯಲ್ಲಿ ವಿವಾಹವನ್ನು ಮೇ ತಿಂಗಳಿನಲ್ಲಿಯೇ ನೋಂದಣಿ ಮಾಡಿದೆ. ಜುಲೈ 18ರಂದು ಹಿಂದು ಸಂಪ್ರದಾಯದಂತೆ ಕೆಲ ಕಾರ್ಯಕ್ರಮಗಳು ವಧುವನ್ನು ಆಕೆಯ ಪತಿಯ ಮನೆಗೆ ಕಳುಹಿಸುವ ಮೊದಲು ಏರ್ಪಡಿಸಲಾಗಿತ್ತು.
ವಧುವಿನ ತಂದೆ ಸ್ಥಳೀಯವಾಗಿ ಜನಪ್ರಿಯವಾಗಿರುವ ಚಿನ್ನಾಭರಣ ಅಂಗಡಿ ಮಾಲಿಕರಾಗಿದ್ದಾರೆ. ವಧುವಿಗೆ ಕೆಲವೊಂದು ಅಂಗ ಊನತೆ ಇರುವುದರಿಂದ ಆಕೆಯ ವಿವಾಹಕ್ಕೆ ಕುಟುಂಬ ಬಹಳಷ್ಟು ಕಷ್ಟ ಪಟ್ಟಿತ್ತು. ಆದರೆ ಯುವತಿ ಮತ್ತಾಕೆಯ ಸಹಪಾಠಿ ವಿವಾಹವಾಗಲು ನಿರ್ಧರಿಸಿದ್ದರಿಂದ ರಿಜಿಸ್ಟರ್ಡ್ ವಿವಾಹ ನಡೆದಿತ್ತು. ಜುಲೈ 18ರಂದು ನಾಸಿಕ್‍ನ ಹೋಟೆಲ್ ಒಂದರಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಒಂದು ಕಾರ್ಯಕ್ರಮ ನೆರವೇರಲಿತ್ತು. ಇದರ ಆಮಂತ್ರಣ ಪತ್ರಿಕೆ ಸೋರಿಕೆಯಾದ ನಂತರ ಈ ಕಾರ್ಯಕ್ರಮ ರದ್ದುಪಡಿಸಬೇಕೆಂದು ಕೆಲ ಹೊರಗಿನವರಿಂದಲೂ ಆಗ್ರಹ ಬಂದಿತ್ತೆನ್ನಲಾಗಿದೆ.
ತಮ್ಮ ಸಮುದಾಯದ ಸದಸ್ಯರೂ ಕಾರ್ಯಕ್ರಮ ನೆರವೇರಿಸದಂತೆ ಸಲಹೆ ನೀಡಿದ್ದರೆಂದು ವಧುವಿನ ತಂದೆ ಹೇಳಿದ್ದಾರೆ. ಆದರೆ ಕೊನೆಗೆ ಅವರಿಬ್ಬರ ತೀರ್ಮಾನವೇ ಮುಖ್ಯ ಎಂದೂ ಅವರು ಹೇಳಿಕೆ ನೀಡಿದ್ದಾರೆ.