ಕೋವಿಡ್ ಟೆಸ್ಟ್ ಕಿಟ್ ಕಚ್ಚಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ
ಹೊಸದಿಲ್ಲಿ,ಜು.13: ಕೋವಿಡ್ ಟೆಸ್ಟ್ ಕಿಟ್ ಗಳ ಉತ್ಪಾದನೆಗೆ ಬಳಕೆಯಾಗುವ ಕಚ್ಚಾವಸ್ತುಗಳಿಗೆ ಹಾಗೂ ನಿರ್ದಿಷ್ಟಪಡಿಸಿದ ಸಕ್ರಿಯ ಫಾರ್ಮಾಸ್ಯೂಟಿಕಲ್ ಸಾಮಾಗ್ರಿಗಳು (ಎಪಿಐ) ಮತ್ತು ಅಂಫೋಟೆರಿಸಿನ್ ಬಿ ಔಷಧಿಯ ತಯಾರಿಕೆಗೆ ಸಂಬಂಧಿಸಿದ ಮಿಶ್ರಣವಾಹಕಗಳಿಗೆೆ ಮೂಲಭೂತ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಕೋವಿಡ್ ಟೆಸ್ಟ್ ಕಿಟ್ ಗಳ ಉತ್ಪಾದನೆಗಾಗಿನ ಕಚ್ಚಾಸಾಮಾಗ್ರಿಗಳಿಗೆ 2021ರ ಸೆಪ್ಟೆಂಬರ್ 30ರವರೆಗೆ ಮೂಲಭೂತ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆಯೆಂದು ಕೇಂದ್ರ ವಿತ್ತ ಸಚಿವಾಲಯವು ಜುಲೈ 12ರಂದು ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಆದರೆ ಅಧಿಸೂಚಿತ ಎಪಿಐ (ಸಕ್ರಿಯ ಫಾರ್ಮಾಸ್ಯೂಟಿಕಲ್ ಸಾಮಾಗ್ರಿಗಳು)/ ಅಂಫೋಟೆರಿಸಿನ್ಬಿಯ ಮಿಶ್ರಣವಾಹಕಗಳಿಗೆ (ಎಕ್ಸ್ಸಿಪಿಯೆಂಟ್ಸ್) ಮೇಲಿನ ಮೂಲಭೂತ ಸುಂಕ ರಿಯಾಯಿತಿಯು ಆಗಸ್ಟ್ 31ರವರೆಗೆ ಸಿಂಧುವಾಗಿರುವುದು ಎಂದವರು ಹೇಳಿದರು.
ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ವಿವಿಧ ಔಷಧಿ, ವೈದ್ಯಕೀಯ ಸಾಮಾಗ್ರಿಳಿಗೆ ತೆರಿಗೆ ರಿಯಾಯಿತಿಯನ್ನು ಘೋಷಿಸಿರುವುದು ಭಾರತ ಸರಕಾರದ ಅತ್ಯಂತ ವಿವೇಚನಾತ್ಮಕ ನಿರ್ಧಾರವೆಂದು ತೆರಿಗೆತಜ್ಞ ಅಭಿಷೇಕ್ ಜೈನ್ ಪ್ರಶಂಸಿಸಿದ್ದಾರೆ.
ಮೂಲಭೂತ ಅಬಕಾರಿ ಸುಂಕ ವಿನಾಯಿತಿಯಿಂದಾಗಿ ಅಂತಹ ಸಾಮಾಗ್ರಿಗಳ ವೆಚ್ಚವಾಗಿದ್ದು, ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ ಎಂದವರು ಹೇಳಿದ್ದಾರೆ.
ಕಳೆದ ತಿಂಗಳು ಹಣಕಾಸು ಸಚಿವಾಲಯ ಕಂದಾಯ ಇಲಾಖೆಯು ಹ್ಯಾಂಡ್ ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್ಗಳು, ಬಿಐಪಿಎಪಿ ಯಂತ್ರ, ಟೆಸ್ಟಿಂಗ್ ಕಿಟ್ ಗಳ, ಆ್ಯಂಬುಲೆನ್ಸ್ಗಳು, ದೇಹದ ಉಷ್ಣಾಂಶ ತಪಾಸಣಾ ಉಪಕರಣ ಸೇರಿದಂತೆ ಕೋವಿಡ್ 19ಗೆ ಸಂಬಂಧಿಸಿದ 18 ಸಾಮಾಗ್ರಿಗಳ ದರಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿತ್ತು.