ರಾಜಸ್ಥಾನ; ನಕಲಿ ಅಂಕ ಪಟ್ಟಿ ಪ್ರಕರಣ: ಬಿಜೆಪಿ ಶಾಸಕನಿಗೆ ನ್ಯಾಯಾಂಗ ಬಂಧನ

Update: 2021-07-13 18:04 GMT
(Photo: Facebook/Amritlal Meena)

ಜೈಪುರ, ಜು. 13: ನಕಲಿ ಅಂಕ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ಉದಯಪುರ ಜಿಲ್ಲೆಯ ಸಾಲುಂಬಾರ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಮೃತ್ ಲಾಲ್ ಮೀನಾಗೆ ಜೈಪುರದಲ್ಲಿರುವ ನ್ಯಾಯಾಲಯ ಜುಲೈ 23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

2015ರಲ್ಲಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನುಕೂಲವಾಗುವಂತೆ ತನ್ನ ಪತ್ನಿಯ ಅಂಕ ಪಟ್ಟಿಯನ್ನು ನಕಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಮೃತ್ ಲಾಲ್ ಮೀನಾ ಸೋಮವಾರ ಸಾರದಾದಲ್ಲಿರುವ ನ್ಯಾಯಾಲಯದ ಮುಂದೆ ಶರಣಾಗತರಾಗಿದ್ದರು. ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಮರಿ ಗ್ರಾಮ ಪಂಚಾಯತ್ನಿಂದ ಚುನಾವಣೆಗೆ ಸ್ಪರ್ಧಿಸಲು ತನ್ನ ಪತ್ನಿ ಶಾಂತಾ ದೇವಿಯ ಶಿಕ್ಷಣದ ದಾಖಲೆಗಳಲ್ಲಿ ಮೀನಾ ಪಾಲಕರಂತೆ ಸಹಿ ಹಾಕಿದ್ದರು. 5ನೇ ತರಗತಿಯ ನಕಲಿ ಅಂಕ ಪಟ್ಟಿ ಸಲ್ಲಿಸಿರುವುದಕ್ಕಾಗಿ ಶಾಂತಾ ದೇವಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅನಂತರ ಶಾಂತಾ ದೇವಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.

2015ರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಸಂದರ್ಭ ನಕಲಿ ಅಂಕ ಪಟ್ಟಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಶಾಂತಾ ದೇವಿ ವಿರುದ್ಧ ಚುನಾವಣೆಯಲ್ಲಿ ಅವರ ಪ್ರತಿಸ್ಪರ್ಧಿಯಾಗಿದ್ದ ಸುಗುಣಾ ದೇವಿ ಸೆಮರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವಹಿಸಲಾಗಿತ್ತು. ತನಿಖೆಯಲ್ಲಿ ಶಾಂತಾ ದೇವಿ ಸಲ್ಲಿಸಿದ ಅಂಕ ಪಟ್ಟಿ ನಕಲಿ ಹಾಗೂ ಅವರು 5ನೇ ತರಗತಿ ಉತ್ತೀರ್ಣರಾಗದೇ ಇರುವುದು ಬೆಳಕಿಗೆ ಬಂತು. ಅನಂತರ ಮೀನಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News