ದೇಶದ ಮೊದಲ ಕೋವಿಡ್ ಸೋಂಕಿತೆಗೆ ಮತ್ತೆ ಕೋವಿಡ್ ಸೋಂಕು

Update: 2021-07-13 18:09 GMT

ತ್ರಿಶೂರ್(ಕೇರಳ), ಜು. 13: ಭಾರತದ ಮೊದಲು ಕೋವಿಡ್ ಸೋಂಕಿತರಾಗಿದ್ದ ವೈದ್ಯೆಗೆ ಮತ್ತೆ ಕೋವಿಡ್ ಸೋಂಕು ತಗುಲಿದೆ ಎಂದು ಕೇರಳದ ತ್ರಿಶೂರ್ನ ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘‘ಅವರು ಮತ್ತೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರು ಆರ್ಟಿ-ಪಿಸಿಆರ್ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಆ್ಯಂಟೀಜನ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಆದರೆ, ಅವರಿಗೆ ಕೋವಿಡ್ ರೋಗ ಲಕ್ಷಣವಿಲ್ಲ’’ ಎಂದು ತ್ರಿಶೂರ್ನ ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ. ಕೆ.ಜೆ. ರೀನಾ ತಿಳಿಸಿದ್ದಾರೆ.

ಅಧ್ಯಯನದ ಉದ್ದೇಶದಿಂದ ಹೊಸದಿಲ್ಲಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿ ಪಾಸಿಟಿವ್ ಆಗಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಯುವತಿ ಮನೆಯಲ್ಲಿ ಸುರಕ್ಷಿವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2020 ಜನವರಿ 30ರಂದು ಚೀನಾದ ವುಹಾನ್ ವಿಶ್ವವಿದ್ಯಾನಿಲಯದ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಯುವತಿಯ ಮಾದರಿ ಪರೀಕ್ಷೆ ವರದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿತ್ತು. ಇದರೊಂದಿಗೆ ಇವರು ಭಾರತದ ಮೊದಲ ಕೋವಿಡ್ ಸೋಂಕಿತೆಯಾಗಿದ್ದರು. ಅನಂತರ ಕೆಲವು ದಿನಗಳ ಬಳಿಕ ಸೆಮಿಸ್ಟರ್ ರಜೆಯಲ್ಲಿ ಅವರು ತನ್ನ ತಾಯ್ನಿಡಿಗೆ ಮರಳಿದ್ದರು.

ತ್ರಿಶೂರ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು ಮೂರು ವಾರಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಅವರ ವರದಿ ನೆಗೆಟಿವ್ ಬಂದಿತ್ತು. ಅನಂತರ ಅವರು ಗುಣಮಖರಾಗಿ 2020 ಫೆಬ್ರವರಿ 20ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News