ಫರೀದ್ ಕೋಟ್ ನಲ್ಲಿ 400 ಗಿಳಿಗಳ ಸಾವು: ತನಿಖೆಗೆ ಪಂಜಾಬ್ ಅರಣ್ಯ ಇಲಾಖೆಗೆ ಎನ್ಜಿಟಿ ನಿರ್ದೇಶ

Update: 2021-07-13 18:15 GMT

ಹೊಸದಿಲ್ಲಿ, ಜು. 13: ಫರೀದ್ಕೋಟ್ ನಲ್ಲಿ ಸುಮಾರು 400 ಗಿಳಿಗಳ ಸಾವಿನ ಕುರಿತು ತನಿಖೆ ನಡೆಸುವಂತೆ ಹಾಗೂ ಗಿಳಿಗಳ ಸಾವಿಗೆ ಕಾರಣ ಪತ್ತೆ ಹಚ್ಚುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪಂಜಾಬ್ ಅರಣ್ಯ ಇಲಾಖೆಗೆ ನಿರ್ದೇಶಿಸಿದೆ.

ಈ ವಿಷಯದಲ್ಲಿ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಪರಿಸರ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಳ್ಳಿ ಎಂದು ಪಂಜಾಬ್ನ ಮುಖ್ಯ ವನ್ಯಜೀವಿ ವಾರ್ಡನ್ ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ನೇತೃತ್ವದ ಪೀಠ ಹೇಳಿದೆ.

ಸಲ್ಲಿಸಲಾದ ದಾಖಲೆಗಳಿಂದ ಗಿಳಿಗಳು ಸಾವು ಯಾಕೆ ಸಂಭವಿಸಿತು ಎಂದು ಸ್ಪಷ್ಟವಾಗಿ ಹೇಳಲು ಕಷ್ಟ. ಆದುದರಿಂದ, ದೊಡ್ಡ ಸಂಖ್ಯೆಯಲ್ಲಿ ಗಿಳಿಗಳು ಸಾವನ್ನಪ್ಪಿರುವುದರ ಬಗ್ಗೆ ತನಿಖೆ ನಡೆಸುವ ಅಗತ್ಯತೆ ಇದೆ ಎಂದು ಪೀಠ ಹೇಳಿದೆ.

‘‘ಈ ವಿಷಯದ ಕುರಿತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಪರಿಶೀಲಿಸಲು ಪರಿಸರ ಇಲಾಖೆ ಅಥವಾ ಇತರ ತಜ್ಞರೊಂದಿಗೆ ಸಮನ್ವಯ ಸಾಧಿಸುವಂತೆ ಪಂಜಾಬ್ ನ ಮುಖ್ಯ ವನ್ಯಜೀವ್ ವಾರ್ಡನ್ ಗೆ ನಾವು ನಿರ್ದೇಶನ ನೀಡಿದ್ದೇವೆ’’ ಎಂದು ಪೀಠ ಹೇಳಿದೆ.

ಫರೀದ್ಕೋಟ್ನ ಉಪ ಆಯುಕ್ತರ ಕಚೇರಿಯ ಆವರಣದಲ್ಲಿ ಗಿಳಿಗಳು ಸಾವನ್ನಪ್ಪಿವೆ. ಇದಕ್ಕೆ ರಾಸಾಯನಿಕ ಸಿಂಪಡಿಸಿರುವುದು ಕಾರಣವೆಂದು ಕಾಣುತ್ತದೆ. ಗಿಳಿಗಳು ಸಾವನ್ನಪ್ಪುವುದನ್ನು ತಡೆಯಲು ನಿರ್ದೇಶನ ನೀಡುವಂತೆ ಕೋರಿ ನ್ಯಾಯವಾದಿ ಎಚ್.ಸಿ. ಅರೋರಾ ಸಲ್ಲಿಸಿದ ಮನವಿಯನ್ನು ಪೀಠ ವಿಚಾರಣೆ ನಡೆಸಿತು.

ಗಿಳಿಗಳ ಇಂತಹ ಸಾವು 2017ರಿಂದ ಪ್ರತಿವರ್ಷ ಸಂಭವಿಸುತ್ತಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರೋರಾ ಮನವಿಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News