ಬಾಂಬೆ ಹೈಕೋರ್ಟ್ ಗೆ ಸ್ಟ್ಯಾನ್ ಸ್ವಾಮಿಯ ವೈದ್ಯಕೀಯ ದಾಖಲೆ ಸಲ್ಲಿಸಿದ ಮಹಾರಾಷ್ಟ್ರ ಸರಕಾರ

Update: 2021-07-13 18:19 GMT

ಮುಂಬೈ, ಜು. 13: ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಬುಡಕಟ್ಟು ಹೋರಾಟಗಾರ ಸ್ಟಾನ್ ಸ್ಟ್ಯಾಮಿ ಅವರ ವೈದ್ಯಕೀಯ ದಾಖಲೆಯನ್ನು ಮಹಾರಾಷ್ಟ್ರ ಸರಕಾರ ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಯಾಗಿದ್ದ 64ರ ಹರೆಯದ ಸ್ಟ್ಯಾನ್ ಸ್ವಾಮಿ ಅವರು ಕಳೆದ ವಾರ ನ್ಯಾಯಾಂಗ ಬಂಧನದಲ್ಲಿದ್ದ ಸಂದರ್ಭ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

 ತಲೋಜಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಇದ್ದ ಸಂದರ್ಭದ ಸ್ಟ್ಯಾನ್ ಸ್ವಾಮಿ ಅವರ ವೈದ್ಯಕೀಯ ದಾಖಲೆಯನ್ನು ರಾಜ್ಯ ಸರಕಾರ ಸಲ್ಲಿಸಿದೆ ಎಂದು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣ್ ಪೈ ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಹಾಗೂ ಎನ್.ಜೆ. ಜಾಮ್ದಾರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. ‌

ಸ್ಟ್ಯಾನ್ ಸ್ವಾಮಿ ಅವರು ಈ ವರ್ಷ ಜುಲೈ 5ರಂದು ಮೃತಪಟ್ಟಿರುವ ಬಗ್ಗೆ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ಸ್ಟ್ಯಾನ್ ಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಮಿಹಿರ್ ದೇಸಾಯಿ ರಾಷ್ಟ್ರೀಯ ತನಿಖಾ ಸಂಸ್ಥೆಯ ನಿರ್ಲಕ್ಷ ಹಾಗೂ ಮಹಾರಾಷ್ಟ್ರ ಕಾರಾಗೃಹದ ಅಧಿಕಾರಿಗಳು ಸೂಕ್ತ ಸಮಯಕ್ಕೆ ಸರಿಯಾದ ವೈದ್ಯಕೀಯ ನೆರವು ಒದಗಿಸಲು ವಿಫಲವಾದ ಕಾರಣದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು.

ವೈದ್ಯಕೀಯ ಕಾರಣಗಳಿಗೆ ಸ್ಟಾನ್ ಸ್ವಾಮಿ ಕೋರಿದ ಜಾಮೀನು ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ವಿಚಾರಣೆಗೆ ಬಾಕಿ ಇರುವ ಪ್ರಕರಣದಲ್ಲಿ ನೀಡಲಾದ ಜಾಮೀನು ಪ್ರಶ್ನಿಸಿ ಸಲ್ಲಿಸಲಾದ ಮನವಿ ಪರಿಶೀಲಿಸುವಂತೆ ದೇಸಾಯಿ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಅಲ್ಲದೆ, ಸ್ಟಾನ್ ಸ್ವಾಮಿ ಅವರು ವೈದ್ಯಕೀಯ ದಾಖಲೆಗಳನ್ನು ಅವಲೋಕಿಸುವಂತೆ ಕೂಡ ಕೋರಿದ್ದರು. ದೇಸಾಯಿ ಅವರ ಕೋರಿಕೆ ಮೇರೆಗೆ ಸ್ಟಾನ್ ಸ್ವಾಮಿ ಅವರ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುಂತೆ ಉಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News