ಮಾನವ ಪ್ರಯತ್ನದಿಂದ ಕೋವಿಡ್ 2ನೇ ಅಲೆ ನಿಯಂತ್ರಿಸುವುದು ಅಸಾಧ್ಯವಾಗಿತ್ತು : ಅಮಿತ್ ಶಾ ಹೇಳಿಕೆ

Update: 2021-07-14 10:36 GMT

ಗಾಂಧಿನಗರ: "ಕೋವಿಡ್-19 ಎರಡನೇ ಅಲೆ ಅದೆಷ್ಟು ವೇಗವಾಗಿ ಹರಡಿತೆಂದರೆ ಮಾನವ ಪ್ರಯತ್ನದಿಂದ ಅದನ್ನು ನಿಯಂತ್ರಿಸುವುದು ಅಸಾಧ್ಯವಾಗಿತ್ತು" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಸದ್ಯ ಎಲ್ಲರೂ ಆದಷ್ಟು ಬೇಗ ಲಸಿಕೆ ಪಡೆದು ಮುಂದೆ ಯಾರು ಕೂಡ ಕೋವಿಡ್‍ಗೆ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಗಾಂಧಿನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕಲೋಲ್ ಎಂಬಲ್ಲಿ  ಹಲವು ಯೋಜನೆಗಳನ್ನು ಉದ್ಘಾಟಿಸಿ  ಶಾ ಮಾತನಾಡುತ್ತಿದ್ದರು.

"ಕೊರೋನಾ ಸಂದರ್ಭ ಇಡೀ ಜಗತ್ತು, ಭಾರತ ಮತ್ತು ಗುಜರಾತ್ ಕಷ್ಟಕರ ಪರಿಸ್ಥಿತಿ ಎದುರಿಸಿದ್ದವು. ನಾವು  ಹಲವು ಸಂಬಂಧಿಗಳನ್ನು ಕಳೆದುಕೊಂಡಿದ್ದೇವೆ.  ಮಾನವನ ಸಾಮರ್ಥ್ಯಕ್ಕೆ ಮೀರಿದ  ಪ್ರಾಕೃತಿಕ ವಿಪತ್ತು ಅಪ್ಪಳಿಸಿದಾಗ ಯಾವುದೇ ಮಾನವ ಶ್ರಮ  ವ್ಯರ್ಥವಾಗುತ್ತದೆ" ಎಂಬ ಗುಜರಾತಿ ನುಡಿಗಟ್ಟು ಒಂದನ್ನು ಉಲ್ಲೇಖಿಸಿ ಅವರು ಹೇಳಿದರು.

"ಈ ದೇಶದ ಪ್ರಧಾನಿ ನರೇಂಧ್ರ ಭಾಯಿ (ಮೋದಿ) ಗ್ರಾಮಗಳಿಗೆ ಹಾಗೂ ನಗರಗಳಿಗೆ ಆರೇಳು ದಿನಗಳೊಳಗಾಗಿ 10 ಪಟ್ಟು ಹೆಚ್ಚು ಆಕ್ಸಿಜನ್ ಪೂರೈಸಲು ಏರ್ಪಾಟು ಮಾಡಿದರು. ಹೊಸ ಆಸ್ಪತ್ರೆಗಳು, ಹೆಚ್ಚು ಹಾಸಿಗೆಗಳ ಏರ್ಪಾಟು ಮಾಡಲಾಯಿತು, ಆಕ್ಸಿಜನ್ ಪೂರೈಸಲು ಫ್ಯಾಕ್ಟರಿಗಳು ಹಗಲಿರುಳು ಕೆಲಸ ಮಾಡಿವೆ, ವಿದೇಶಗಳಿಂದ ಕ್ರಯೋಜೆನಿಕ್ ಟ್ಯಾಂಕರ್‍ಗಳನ್ನು ಆಮದುಗೊಳಿಸಲಾಯಿತು.  

ಎಲ್ಲಾ ಏರ್ಪಾಟು ಮಾಡಿದರೂ ನಾವು ಹಲವು ಸಂಬಂಧಿಕರನ್ನು ಕಳೆದುಕೊಂಡೆವು. ಈಗ  ನರ್ದೀಪುರ್ ಮತ್ತು ಗಾಂಧಿನಗರ ಕ್ಷೇತ್ರದ ಯಾರು ಕೂಡ ಕೊರೋನಾದಿಂದ ಸಾವನ್ನಪ್ಪಬಾರದು ಎಂದು ನಾವು ಪ್ರತಿಜ್ಞೆ ಮಾಡಬೇಕು. ಇದು ಸಾಧ್ಯ. ನರೇಂದ್ರಭಾಯಿ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗೆ ಏರ್ಪಾಟು ಮಾಡಿದ್ದಾರೆ" ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News