ಅಸ್ಸಾಂ ಪೊಲೀಸರಿಂದ 'ಸರಣಿ ಎನ್‍ಕೌಂಟರ್' ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ: ಆಯೋಗಕ್ಕೆ ದೂರಿದ ದಿಲ್ಲಿ ವಕೀಲ

Update: 2021-07-14 10:38 GMT

ಗುವಾಹಟಿ: ಅಸ್ಸಾಂನಲ್ಲಿ ಈ ವರ್ಷದ ಮೇ ತಿಂಗಳಿನಿಂದ 20ಕ್ಕೂ ಹೆಚ್ಚು ಎನ್‍ಕೌಂಟರ್ ಗಳು ನಡೆದಿವೆ, ಅಸ್ಸಾಂ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆಂದು ಆರೋಪಿಸಿ ದಿಲ್ಲಿ ಮೂಲದ ವಕೀಲ ಆರಿಫ್ ಜ್ವದ್ದೆರ್ ಎಂಬವರು  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಅಸ್ಸಾಂ ಪೊಲೀಸರು ಇತ್ತೀಚಿನ ವಾರಗಳಲ್ಲಿ `ಸರಣಿ ಎನ್‍ಕೌಂಟರ್' ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

"ಶಂಕಿತ ಕ್ರಿಮಿನಲ್‍ಗಳ ಕಾಲಿಗೆ ಗುಂಡು ಹೊಡೆಯಬೇಕು ಇದು ಕಾನೂನಿನಡಿಯಲ್ಲಿ ಅನುಮತಿಸಲಾಗಿದೆ ಎಂದು ಪೊಲೀಸ್ ಸಮ್ಮೇಳನವೊಂದರ ವೇಳೆ ಮುಖ್ಯಮಂತ್ರಿ ಹೇಳಿದ್ದರು.  ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆಯ ನಂತರ ಪೊಲೀಸರು ಬೇಕಾಬಿಟ್ಟಿ ನಕಲಿ ಎನ್‍ಕೌಂಟರ್ ನಡೆಸುತ್ತಿದ್ದಾರೆ" ಎಂದು ಆಯೋಗಕ್ಕೆ ಜುಲೈ 10ರಂದು ಬರೆದ ಪತ್ರದಲ್ಲಿ ಆರಿಫ್ ಹೇಳಿದ್ದಾರೆ.

"ಕೆಲ ಸಣ್ಣ ಪುಟ್ಟ ಅಪರಾಧಗಳನ್ನು ಮಾಡಿದವರ ಮೇಲೆಯೂ ಗುಂಡು ಹಾರಿಸಲಾಗುತ್ತಿದೆ, ಅವರು ಪೊಲೀಸರ ಪಿಸ್ತೂಲ್ ಸೆಳೆದ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಇಂತಹ ʼನಕಲಿ ಎನ್‍ಕೌಂಟರ್'ಗೆ ಬಲಿಯಾದವರ ಪೈಕಿ ಹೆಚ್ಚಿನವರು ಡ್ರಗ್ಸ್ ದಂಧೆಕೋರರು ಹಾಗೂ ಅಕ್ರಮ ಗೋಸಾಗಾಟಗಾರರು" ಎಂದು ಅವರು ಆರೋಪಿಸಿದ್ದಾರೆ.

"ತಮ್ಮ ಪತ್ರದಲ್ಲಿ ಅವರು 10 ಪ್ರಕರಣಗಳನ್ನು ಉಲ್ಲೇಖಿಸಿ, ಸತ್ತವರು ಉಗ್ರರಾಗಿರಲಿಲ್ಲ ಹಾಗೂ ಅವರಿಗೆ ಪಿಸ್ತೂಲ್ ಬಳಸುವುದು ಗೊತ್ತಿಲ್ಲ ಹಾಗೂ ಅವರು ದೊಡ್ಡ ಸಂಖ್ಯೆಯಲ್ಲಿದ್ದ ಶಸ್ತ್ರಸಜ್ಜಿತ ಪೊಲೀಸರ ಪಿಸ್ತೂಲ್ ಸೆಳೆದು ಪರಾರಿಯಾಗಲು ಯತ್ನಿಸುವ ಸಾಧ್ಯತೆ ಕಡಿಮೆ" ಎಂದು ದೂರಿನಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News