ನಂದಿಗ್ರಾಮ ಚುನಾವಣೆ :ಇವಿಎಂಗಳನ್ನು ಸಂರಕ್ಷಿಸಿಡಲು ಕಲ್ಕತ್ತಾ ಹೈಕೋರ್ಟ್ ಆದೇಶ
ಹೊಸದಿಲ್ಲಿ: ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಲಾಗುವುದು ಎಂದಿರುವ ಕಲ್ಕತ್ತಾ ಹೈಕೋರ್ಟ್,ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಕಾಗದ-ಪತ್ರಗಳು ಹಾಗೂ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು(ಇವಿಎಂ) ಸಂರಕ್ಷಿಸಬೇಕು ಎಂದು ಬುಧವಾರ ಆದೇಶಿಸಿದೆ.
ಈ ಪ್ರಕರಣವನ್ನು ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರು ಬಿಜೆಪಿಯ ಚುನಾಯಿತ ಅಭ್ಯರ್ಥಿ ಸುವೇಂದು ಅಧಿಕಾರಿಗೆ ನೋಟಿಸ್ ನೀಡಿದರು. ಅರ್ಜಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲಿ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಕಾಗದ-ಪತ್ರಗಳು, ಎಲ್ಲಾ ದಾಖಲೆಗಳು, ವೀಡಿಯೊ ಧ್ವನಿಮುದ್ರಣಗಳು ಹಾಗೂ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು(ಇವಿಎಂ) ಸಂರಕ್ಷಿಸಬೇಕು ಎಂದು ನಿರ್ದೇಶನ ನೀಡಿದರು. ಚುನಾವಣಾ ಆಯೋಗ ಹಾಗೂ ರಿಟರ್ನಿಂಗ್ ಅಧಿಕಾರಿಗೆ ಆದೇಶದ ಪ್ರತಿಯನ್ನು ಕಳುಹಿಸಿಕೊಡುವಂತೆ ರಿಜಿಸ್ಟ್ರಿಗೆ ನ್ಯಾಯಾಲಯ ನಿರ್ದೇಶನ ನೀಡಿತು
ಆನ್‌ಲೈನ್ ವಿಚಾರಣೆಗೆ ಹಾಜರಾದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ.
ಲಂಚ, ದ್ವೇಷದ ಪ್ರಚಾರ, ಧರ್ಮದ ಆಧಾರದಲ್ಲಿ ಮತಗಳ ಯಾಚನೆ, ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಸುವೇಂದು ಮತದಾನದಲ್ಲಿ ಅಕ್ರಮ ಎಸಗಿದ್ದಾರೆ ಎಂದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 12 ರಂದು ನಡೆಯಲಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುವೇಂದು ಅಧಿಕಾರಿಯ ವಿರುದ್ಧ ಸೋತಿದ್ದರು. ಆದರೆ ಅವರ ನೇತೃತ್ವದ ಟಿಎಂಸಿ ಪಕ್ಷವು ರಾಜ್ಯದ ಬೇರೆಡೆ ದೊಡ್ಡ ಜಯ ಸಾಧಿಸಿದೆ. ಭಾರೀ ಕುತೂಹಲ ಕೆರಳಿಸಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಅವರು ಪ್ರತಿಸ್ಪರ್ಧಿ ಅಧಿಕಾರಿಯ ವಿರುದ್ಧ 2,000 ಕ್ಕಿಂತ ಕಡಿಮೆ ಮತಗಳಿಂದ ಸೋತಿದ್ದರು.
ಮತಗಳ ಮರು ಎಣಿಕೆಗೆ ಮಮತಾ ಬ್ಯಾನರ್ಜಿ ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದ ನಂತರ ಅವರು ನ್ಯಾಯಾಲಯದಲ್ಲಿ ಫಲಿತಾಂಶವನ್ನು ಪ್ರಶ್ನಿಸಿದ್ದರು ಹಾಗೂ ಸುವೇಂದು ಅಧಿಕಾರಿಯ ಆಯ್ಕೆಯನ್ನು ಅನೂರ್ಜಿತವೆಂದು ಘೋಷಿಸಬೇಕೆಂದು ಕೋರಿದ್ದರು.