×
Ad

ಭಾರತದಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳವುದಕ್ಕೆ ಮಾಸ್ಟರ್‌ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ

Update: 2021-07-14 19:13 IST
photo: twitter

ಹೊಸದಿಲ್ಲಿ,ಜು.14: ಆರ್ಬಿಐ ಜು.22ರಿಂದ ಮಾಸ್ಟರ್‌ ಕಾರ್ಡ್ ತನ್ನ ಜಾಲದಲ್ಲಿ ಡೆಬಿಟ್,‌ ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಈ ಮೂರೂ ವರ್ಗಗಳಡಿ ಭಾರತದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದರ ಮೇಲೆ ಬುಧವಾರ ನಿರ್ಬಂಧವನ್ನು ಹೇರಿದೆ. ಪಾವತಿ ವ್ಯವಸ್ಥೆಗಳ ದತ್ತಾಂಶ ಸಂಚಯ ಕುರಿತು ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಾಸ್ಟರ್‌ ಕಾರ್ಡ್ ವಿರುದ್ಧ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ವೇಳೆ ತನ್ನ ಆದೇಶವು ಮಾಸ್ಟರ್‌ ಕಾರ್ಡ್ ನ ಹಾಲಿ ಗ್ರಾಹಕರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಮತ್ತು ಆರ್ಬಿಐ ನಿರ್ದೇಶಕ್ಕೆ ಬದ್ಧರಾಗಿರುವಂತೆ ಮಾಸ್ಟರ್‌ ಕಾರ್ಡ್ ಗಳನ್ನು ವಿತರಿಸುವ ಎಲ್ಲ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ತಿಳಿಸಬೇಕಾಗುತ್ತದೆ ಎಂದೂ ಹೇಳಿಕೆಯಲ್ಲಿ ಸೂಚಿಸಲಾಗಿದೆ.

ಗಣನೀಯ ಸಮಯ ವ್ಯರ್ಥವಾಗಿದ್ದರೂ ಮತ್ತು ಸಾಕಷ್ಟು ಅವಕಾಶಗಳನ್ನು ಮಾಸ್ಟರ್ ಕಾರ್ಡ್‌ ಗೆ ನೀಡಲಾಗಿದ್ದರೂ ಅದು ಪಾವತಿ ವ್ಯವಸ್ಥೆ ದತ್ತಾಂಶ ಸಂಚಯ ಕುರಿತು ತನ್ನ ನಿರ್ದೇಶಗಳನ್ನು ಪಾಲಿಸದಿರುವುದು ಕಂಡು ಬಂದಿದೆ ಎಂದು ಆರ್ಬಿಐ ತಿಳಿಸಿದೆ.

ತಾವು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ತಮ್ಮ ಎಲ್ಲ ದತ್ತಾಂಶಗಳನ್ನು ಭಾರತದಲ್ಲಿ ಮಾತ್ರ ವ್ಯವಸ್ಥೆಯೊಂದರಲ್ಲಿ ಸಂಚಯಿಸುವಂತೆ 2018,ಎಪ್ರಿಲ್ನಲ್ಲಿ ಎಲ್ಲ ಪಾವತಿ ವ್ಯವಸ್ಥೆ ಸೇವೆಗಳ ಪೂರೈಕೆದಾರರಿಗೆ ತಿಳಿಸಿದ್ದ ಆರ್ಬಿಐ,ಅದಕ್ಕಾಗಿ ಆರು ತಿಂಗಳ ಗಡುವನ್ನು ವಿಧಿಸಿತ್ತು.

ಈ ಎಲ್ಲ ಷರತ್ತುಗಳನ್ನು ಪಾಲಿಸುವಲ್ಲಿ ಮಾಸ್ಟರ್ಕಾರ್ಡ್ ವಿಫಲಗೊಂಡಿದೆ.
ಈ ವರ್ಷದ ಆರಂಭದಲ್ಲಿ ಆರ್ಬಿಐ ಅಮೇರಿಕನ್ ಎಕ್ಸ್ಪ್ರೆಸ್ ಮತ್ತು ಡೈನರ್ಸ್ ಕ್ಲಬ್ ವಿರುದ್ಧ ಇಂತಹುದೇ ಕ್ರಮವನ್ನು ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News