ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಕಾರ್ನೆಲ್ ವೆಸ್ಟ್ ರಾಜೀನಾಮೆ

Update: 2021-07-14 15:20 GMT
photo : twitter/@Harvard

ವಾಶಿಂಗ್ಟನ್, ಜು. 14: ಅಮೆರಿಕದ ಪ್ರಮುಖ ಬುದ್ಧಿಜೀವಿಗಳ ಪೈಕಿ ಒಂದಾಗಿರುವ ಡಾ, ಕಾರ್ನೆಲ್ ವೆಸ್ಟ್ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ರಾಜೀನಾಮೆ ನೀಡಿದ್ದು, ವಿಶ್ವವಿದ್ಯಾನಿಲಯ ಅನುಸರಿಸುತ್ತಿರುವ ‘ಫೆಲೆಸ್ತೀನ್ ವಿರೋಧಿ ಪೂರ್ವಾಗ್ರಹ’ ತನ್ನ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಅವರು ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷಗಳ ಕಾಲ ಬೋಧನೆ ಮಾಡಿದ್ದಾರೆ.
ಇನ್ನು ಅವರು ಯೂನಿಯನ್ ತಿಯಾಲಜಿಕಲ್ ಸೆಮಿನರಿಗೆ ವಾಪಸಾಗಲಿದ್ದಾರೆ. ಅಲ್ಲಿ ಅವರು 44 ವರ್ಷಗಳ ಹಿಂದೆ ಮೊದಲು ಬೋಧನೆ ಮಾಡಿದ್ದರು.

ತನ್ನ ರಾಜೀನಾಮೆಗೆ ಕಾರಣಗಳನ್ನು ವಿವರಿಸುವ ಪತ್ರದ ಪ್ರತಿಯೊಂದನ್ನು ವೆಸ್ಟ್ ಟ್ವಿಟರ್ನಲ್ಲಿ ಹಾಕಿದ್ದಾರೆ. 67 ವರ್ಷದ ತತ್ವಜ್ಞಾನಿ, ರಾಜಕೀಯ ಕಾರ್ಯಕರ್ತ ಮತ್ತು ಸಾಮಾಜಿಕ ವಿಮರ್ಶಕನಾಗಿರುವ ವೆಸ್ಟ್, ತನ್ನ ಸೇವಾವಧಿ ಬಗ್ಗೆ ಈ ವರ್ಷದ ಪ್ರಾರಂಭದಿಂದಲೂ ಹಾರ್ವರ್ಡ್ ಡಿವಿನಿಟಿ ಸ್ಕೂಲ್ನೊಂದಿಗೆ ಸಾರ್ವಜನಿಕವಾಗಿ ಸಂಘರ್ಷದಲ್ಲಿ ತೊಡಗಿದ್ದರು.

ಶ್ರೇಷ್ಠ ವಿಚಾರವಾದಿ ಎಂಬುದಾಗಿ ಗುರುತಿಸಲ್ಪಟ್ಟಿರುವ ವೆಸ್ಟ್ಗೆ ಯಾಕೆ ಸೇವಾವಧಿಯನ್ನು ನಿರಾಕರಿಸಲಾಗುತ್ತಿದೆ ಎಂಬ ಬಗ್ಗೆ ಭಾರೀ ಊಹಾಪೋಹಗಳು ಹಬ್ಬಿದ್ದವು. ಫೆಲೆಸ್ತೀನೀಯರಿಗೆ ಅವರು ನೀಡುತ್ತಿರುವ ಬಹಿರಂಗ ಬೆಂಬಲ ಹಾಗೂ ಇಸ್ರೇಲ್ ನ ಕಟು ಟೀಕೆ ಅವರ ಸೇವಾವಧಿ ವಿಸ್ತರಣೆಗೆ ಪ್ರಮುಖ ತಡೆಯಾಗಿದ್ದವು ಎಂಬುದಾಗಿ ಭಾವಿಸಲಾಗಿತ್ತು.

ಇಸ್ರೇಲ್ ಕುರಿತ ಟೀಕೆಯನ್ನು ನಿವಾರಿಸುವುದಕ್ಕಾಗಿ ಹಲವು ಇಸ್ರೇಲ್ ಪರ ಗುಂಪುಗಳು ಹಲವು ವರ್ಷಗಳ ಅವಧಿಯಲ್ಲಿ ಅಮೆರಿಕದಾದ್ಯಂತ ಯಶಸ್ವಿ ಅಭಿಯಾನಗಳನ್ನು ನಡೆಸಿವೆ. ಈ ಅಭಿಯಾನವು ವಾಕ್ ಸ್ವಾತಂತ್ರ್ಯದ ಹಕ್ಕನ್ನು ನೀಡುವ ಅಮೆರಿಕ ಸಂವಿಧಾನದ ಒಂದನೇ ತಿದ್ದುಪಡಿಯ ಮೇಲಿನ ದಾಳಿಯಾಗಿದೆ ಎಂಬುದಾಗಿ ಹಲವರು ಭಾವಿಸುತ್ತಾರೆ.

ತಾನು ಕೂಡ ಈ ಅಭಿಯಾನದ ಬಲಿಪಶು ಎಂಬುದಾಗಿ ವೆಸ್ಟ್ ಈಗಾಗಲೇ ಹೇಳಿದ್ದಾರೆ.
‘‘ನನ್ನ ಕ್ರೈಸ್ತ ಧರ್ಮವು ಫೆಲೆಸ್ತೀನ್ ಮತ್ತು ಯಹೂದಿ ಮಕ್ಕಳನ್ನು ಎಲ್ಲ ಮಕ್ಕಳಂತೆ ಸಮಾನವಾಗಿ ಕಾಣುತ್ತದೆ ಹಾಗೂ ಎಲ್ಲ ಅತಿಕ್ರಮಣಗಳನ್ನು ಅನೈತಿಕ ಎಂಬುದಾಗಿ ತಿರಸ್ಕರಿಸುತ್ತದೆ. ನನ್ನಂಥ ಸ್ವತಂತ್ರ ಕರಿಯ ವ್ಯಕ್ತಿಗೆ ಹಾರ್ವರ್ಡ್ ಸೂಕ್ತ ಸ್ಥಳವೇ?’’ ಎಂಬುದಾಗಿ ವಿವಾದ ಮೊದಲು ಬೆಳಕಿಗೆ ಬಂದ ವೇಳೆ ವೆಸ್ಟ್ ಹೇಳಿದ್ದರು.

‘‘ನನ್ನ ಸೇವಾವಧಿ ವಿಸ್ತರಿಸಲು ನಿರಾಕರಿಸುವ ಹಾರ್ವರ್ಡ್ನ ನಿರ್ಧಾರವು ರಾಜಕೀಯ ಪ್ರೇರಿತವಾಗಿದೆ ಹಾಗೂ ಅದಕ್ಕೂ ಪ್ರೊಫೆಸರ್ ನೆಲೆಯಲ್ಲಿನ ನನ್ನ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News