ಹಣ ದರೋಡೆ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಬಿಜೆಪಿಯ ಕೇರಳ ಅಧ್ಯಕ್ಷ ಸುರೇಂದ್ರನ್

Update: 2021-07-14 16:45 GMT

ತ್ರಿಶೂರು, ಜು. 14: ಕೋಡಕಾರ ಹವಾಲ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತ್ರಿಶೂರ್ ವಲಯ ಡಿಐಜಿ ಎ. ಅಕ್ಬರ್ ನೇತೃತ್ವದ ವಿಶೇಷ ತನಿಖಾ ತಂಡ ಬಿಜೆಪಿಯ ಕೇರಳದ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಬುಧವಾರ ವಿಚಾರಣೆ ನಡೆಸಿದೆ. ಜುಲೈ 6ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ತನಿಖಾ ತಂಡ ಸುರೇಂದ್ರನ್ ಅವರಿಗೆ ನೋಟಿಸು ಜಾರಿ ಮಾಡಿತ್ತು. ಆದರೆ, ಅವರು ಪಕ್ಷದ ಸಭೆಯ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೆ, ಹಾಜರಾಗಲು ಒಂದು ವಾರಗಳ ಕಾಲಾವಕಾಶ ಕೋರಿದ್ದರು. 

ಸುರೇಂದ್ರನ್ ಅವರು ವಿಚಾರಣೆಗೆ ತ್ರಿಶೂರ್ ನ ಪೊಲೀಸ್ ಕ್ಲಬ್ ಗೆ ಬೆಳಗ್ಗೆ 10.30ಕ್ಕೆ ತ್ರಿಶೂರ್ ಹಾಜರಾದರು. ಇಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸುರೇಂದ್ರನ್, ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ತ್ರಿಶೂರ್ ನ ಹೊರವಲಯವಾದ ಕೋಡಕಾರದಲ್ಲಿ ಹಣ ದರೋಡೆಯೊಂದಿಗೆ ಕೊನೆಗೊಂಡ ಹವಾಲ ವರ್ಗಾವಣೆ ಪ್ರಕರಣದೊಂದಿಗೆ ತನಗಾಗಲಿ, ತನ್ನ ಪಕ್ಷಕ್ಕಾಗಲಿ ಯಾವುದೇ ನಂಟು ಇಲ್ಲ ಎಂದು ಅವರು ಹೇಳಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಯಿತು. 

ಕೇರಳ ಪೊಲೀಸ್ ನ ಇತಿಹಾಸದಲ್ಲೇ ಮೊದಲ ಬಾರಿಗೆ ದೂರುದಾರನ ಫೋನ್ ಕರೆ ಪತ್ತೆ ಮಾಡುವ ಮೂಲಕ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತ ಧರ್ಮರಾಜನ್ ನೀಡಿದ ಹೇಳಿಕೆಯ ಆಧಾರದಲ್ಲಿ ತನಿಖಾ ತಂಡ ವಿಚಾರಣೆಗೆ ಹಾಜರಾಗುವಂತೆ ಸುರೇಂದ್ರನ್ ಗೆ ನೋಟಿಸು ಜಾರಿ ಮಾಡಿತ್ತು. ಈ ಬಗ್ಗೆ ಧರ್ಮರಾಜನ್ ಅವರ ವಾಹನದ ಚಾಲಕ ಶಂಝ್ಜೆರ್ ದೂರು ದಾಖಲಿಸಿದ್ದರು. 

ಧರ್ಮರಾಜನ್ ಅವರು ಎಪ್ರಿಲ್ 3ರಂದು 25 ಲಕ್ಷ ರೂಪಾಯಿಯನ್ನು ಕೋಝಿಕ್ಕೋಡ್ನಿಂದ ಕೊಚ್ಚಿಗೆ ಕೊಂಡೊಯ್ಯುತ್ತಿದ್ದರು. ಈ ಸಂದರ್ಭ ಕೋಡಕಾರದಲ್ಲಿ ಧರ್ಮರಾಜನ್ ಅವರ ವಾಹನವನ್ನು ತಡೆ ಹಿಡಿದ ತಂಡವೊಂದು ಹಣವನ್ನು ದರೋಡೆ ಮಾಡಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ದರೋಡೆ ಮಾಡಲಾದ ವಾಸ್ತವ ಮೊತ್ತ 3.5 ಕೋಟಿ ರೂಪಾಯಿ ಹಾಗೂ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಬಳಸಲು ಇದನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News