ಕೋವಿಡ್: ರಾಜ್ಯಗಳಲ್ಲಿ ‘ಆರ್-ಫ್ಯಾಕ್ಟರ್’ ಹೆಚ್ಚಳಕ್ಕೆ ಕೇಂದ್ರದ ಕಳವಳ

Update: 2021-07-14 18:06 GMT

ಹೊಸದಿಲ್ಲಿ, ಜು. 14: ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನ ವೈರಸ್ನ ‘ಆರ್-ಫ್ಯಾಕ್ಟರ್’ (ಒಬ್ಬರಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತದೆ ಎನ್ನುವುದರ ಮಾಪಕ) ನಲ್ಲಿ ಏರಿಕೆಯಾಗಿರುವ ಕುರಿತ ಆತಂಕದ ನಡುವೆ ಕೇಂದ್ರ ಗೃಹ ಸಚಿವಾಲಯ, ಸಾರ್ವಜನಿಕರು ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸುವ ಬಗ್ಗೆ ಖಾತರಿ ನೀಡುವಂತೆ ಸರಕಾರಗಳನ್ನು ಆಗ್ರಹಿಸಿ ಸಲಹೆಗಳನ್ನು ಬಿಡುಗಡೆ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಸಾರ್ವಜನಿಕ ಸಾಗಾಟ ಹಾಗೂ ಗಿರಿಧಾಮಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ‌

ಪರಿಣಾಮ ಕೆಲವು ರಾಜ್ಯಗಳಲ್ಲಿ ‘ಆರ್-ಫ್ಯಾಕ್ಟರ್’ ಆತಂಕದ ವಿಷಯವಾಗಿದೆ. ‘ಆರ್-ಫ್ಯಾಕ್ಟರ್’ 1.0ಗಿಂತ ಹೆಚ್ಚು ಇರುವುದು ಕೋವಿಡ್ ಅತ್ಯಧಿಕ ಹರಡುತ್ತಿದೆ ಎಂಬುದಕ್ಕೆ ಸೂಚಕ ಎಂದು ಕೇಂದ್ರ ಗೃಹ ಸಚಿವಾಲಯ ರವಾನಿಸಿದ ಪತ್ರದಲ್ಲಿ ಹೇಳಲಾಗಿದೆ. ಅಂಗಡಿ, ಮಾಲ್, ಮಾರುಕಟ್ಟೆ, ರೆಸ್ಟೋರೆಂಟ್, ಬಾರ್, ಬಸ್ ನಿಲ್ದಾಣ, ರೈಲ್ವೆ ಫ್ಲಾಟ್ಫಾರ್ಮ್/ನಿಲ್ದಾಣ, ಬ್ಯಾಂಕ್ವೆಟ್ ಹಾಲ್/ವಿವಾಹ ಸಭಾಂಗಣ, ಕ್ರೀಡಾಂಗಣ/ಕ್ರೀಡಾ ಸಂಕೀರ್ಣ (ತೆರೆದ) ಸೇರಿದಂತೆ ಎಲ್ಲ ತೆರೆದ ಸ್ಥಳಗಳು ಹಾಗೂ ಕೋವಿಡ್ ಹರಡುವ ಹಾಟ್ ಸ್ಪಾಟ್‌ ಳೆಂದು ಗುರುತಿಸಲಾದ ಇತರ ಎಲ್ಲ ಪ್ರದೇಶಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯ ಖಾತರಿ ನೀಡಲು ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಗೃಹ ಸಚಿವಾಲಯ ತಿಳಿಸಿದೆ. ಗಿರಿಧಾಮಗಳು ಹಾಗೂ ನಗರದ ಮಾರುಕಟ್ಟೆಗಳಲ್ಲಿ ಸಾವಿರಾರು ಜನರು ಮಾಸ್ಕ್ ಇಲ್ಲದೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಕೊರೋನ ಮೂರನೇ ಅಲೆಯನ್ನು ಆಹ್ವಾನಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಎಚ್ಚರಿಸಿದ ದಿನದ ಬಳಿಕ ಗೃಹ ಸಚಿವಾಲಯ ಈ ಪತ್ರ ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News