ಪ.ಬಂಗಾಳ: ಶೀಘ್ರ ಉಪಚುನಾವಣೆ ನಡೆಸಲು ಆಗ್ರಹ; ಚುನಾವಣಾ ಆಯೋಗ ಭೇಟಿಗೆ ಟಿಎಂಸಿ ನಿರ್ಧಾರ

Update: 2021-07-14 18:21 GMT

ಕೋಲ್ಕತಾ, ಜು.14: ಪಶ್ಚಿಮ ಬಂಗಾಳದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ವಿಧಾನಸಭೆ ಉಪಚುನಾವಣೆ ಹಾಗೂ 7 ವಿಧಾನಸಭೆ ಕ್ಷೇತ್ರಗಳಿಗೆ ಬಾಕಿಯಿರುವ ಚುನಾವಣೆಯನ್ನು ಶೀಘ್ರ ನಡೆಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ ಜುಲೈ 15ರಂದು ಟಿಎಂಸಿ ನಿಯೋಗ ಚುನಾವಣಾ ಆಯೋಗವನ್ನು ಭೇಟಿಯಾಗಲಿದೆ ಎಂದು ಮೂಲಗಳು ಹೇಳಿವೆ. 

ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಸೋತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಉಪಚುನಾವಣೆ ನಡೆಯುವುದು ಅತ್ಯಂತ ಅಗತ್ಯವಾಗಿದೆ. ವಿಧಾನಸಭೆ, ಪರಿಷತ್ತು, ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗದಿದ್ದರೂ ಸಚಿವರಾದವರು 6 ತಿಂಗಳೊಳಗೆ ಆಯ್ಕೆಯಾಗದಿದ್ದರೆ ಅವರು ಹುದ್ದೆ ತ್ಯಜಿಸಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 4ರೊಳಗೆ ವಿಧಾನಸಭೆಗೆ ಆಯ್ಕೆಯಾಗದಿದ್ದರೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಾಗದು. 

ಕೊರೋನ ಸೋಂಕು ಸಾರ್ವಕಾಲಿಕ ಗರಿಷ್ಟ ಮಟ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯನ್ನು 8 ಹಂತದಲ್ಲಿ ನಡೆಸಲಾಗಿದೆ. ಆದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದರೂ ಚುನಾವಣಾ ಆಯೋಗ ಉಪಚುನಾವಣೆ ವಿಳಂಬಿಸುತ್ತಿದೆ. ಮೂರನೇ ಅಲೆಗೆ ಅವರು ಕಾಯುತ್ತಿರಬಹುದೇ? ಸಾಧ್ಯವಾದಷ್ಟು ಬೇಗ ಉಪಚುನಾವಣೆ ನಡೆಸಬೇಕೆಂಬುದು ನಮ್ಮ ಆಶಯವಾಗಿದೆ ಎಂದು ರಾಜ್ಯಸಭೆಯಲ್ಲಿ ಟಿಎಂಸಿಯ ಪ್ರಧಾನ ಸಚೇತಕ ಸುಖೇಂದು ಶೇಕರ್ರಾಯ್ ಹೇಳಿದ್ದಾರೆ. 

ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಸಂಸದರಾದ ನಿತೀಶ್ ಪ್ರಮಾಣಿಕ್ ಮತ್ತು ಜಗನ್ನಾಥ್ ಸರ್ಕಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಈ ಸ್ಥಾನ ತೆರವಾಗಿದೆ. ಈ ಮಧ್ಯೆ, ಮಮತಾ ಬ್ಯಾನರ್ಜಿಯವರ ಭದ್ರಕೋಟೆ ಎಂದೇ ಹೇಳಲಾಗಿರುವ ಭವಾನಿಪೋರ್ನಿಂದ ಗೆದ್ದುಬಂದಿದ್ದ ಟಿಎಂಸಿ ಮುಖಂಡ ಸೋವನ್ದೇಬ್ ಛಟ್ಟೋಪಾಧ್ಯಾಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಮತಾ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದಾರೆ. ಟಿಎಂಸಿ ಅಭ್ಯರ್ಥಿಗಳಾಗಿದ್ದ ಕಾಜಲ್ ಸಿನ್ಹಾ ಹಾಗೂ ಜಯಂತ ನಾಸ್ಕರ್ ಕೊರೋನದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಖರ್ಡಾಹ್ ಮತ್ತು ಗೋಸಾಬ ಕ್ಷೇತ್ರಗಳ ಚುನಾವಣೆ ತಡೆಹಿಡಿಯಲಾಗಿತ್ತು. ಇದೇ ರೀತಿ, ಸಂಸೇರ್ಗಂಜ್ ಹಾಗೂ ಮುರ್ಷಿದಾಬಾದ್ ಕ್ಷೇತ್ರದ ಚುನಾವಣೆಯನ್ನೂ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News